ಪುಣ್ಯವಶಾತ್ ತಪ್ಪಿದ ಭಾರೀ ದುರಂತ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಆಗಸ್ಟ್ 3ರ ಸೋಮವಾರದಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಗೆ ತಾಲೂಕಿನ ಹಲವಡೆ ಅವಘಡ ಹಾಗೂ ಆಸ್ತಿಪಾಸ್ತಿ ನಷ್ಟ ಸಂಭವಿಸಿದ್ದು; ಪಡಂಗಡಿ ಗ್ರಾಮದ ಕನ್ನಡಿಕಟ್ಟೆಯಲ್ಲರುವ ರಬ್ಬರ್ ನರ್ಸರಿ ಮುಂಭಾಗದಲ್ಲಿ ಗುರುವಾಯನಕೆರೆ ವಿದ್ಯುತ್ ಸಬ್‌ಸ್ಟೇಷನ್ ನಿಂದ ವೇಣೂರು ಸಬ್‌ಸ್ಟೇಷನ್ ಗೆ ಹೋಗುವ 33 ಕೆ.ವಿ. ವಿದ್ಯುತ್ ಕಂಬ ಆಗಸ್ಟ್ 4ರ ಬೆಳಿಗ್ಗೆ ಚಲಿಸುತ್ತಿದ್ದ ಪಿಕ್‌ಅಪ್ ವಾಹನದ ಮೇಲೆ ಬಿದ್ದು ವಾಹನ ಜಖಂಗೊಂಡಿದ್ದು; ಪುಣ್ಯವಶಾತ್ ವಾಹನದಲ್ಲಿದವರಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಾಳಾಗಲಿಲ್ಲ. ವಿದ್ಯುತ್ ಕಂಬ ಬಿದ್ದ ರಭಸಕ್ಕೆ ವಿದ್ಯುತ್ ಲೈನ್ ಟ್ರಿಪ್ ಆದದ್ದರಿಂದ ಯಾವುದೇ ವಿದ್ಯುತ್ ಅವಘಡ ಸಂಭವಿಸಿ ವಾಹನದಲ್ಲಿದ್ದವರಿಗೆ ಪ್ರಾಣಾಪಾಯವಾಗಿಲ್ಲ.
ಈ ವಿದ್ಯುತ್ ಕಂಬಗಳನ್ನು ಸರಿಯಾದ ರೀತಿಯಲ್ಲಿ ಅಂತರ ಕಾಯ್ದುಕೊಳ್ಳದೆ ಎಲ್ಲೆಂದರಲ್ಲಿ ಸಿಕ್ಕಸಿಕ್ಕ ಕಡೆಗಳಲ್ಲಿ ಹಾಕಿದ್ದು; ರಸ್ತೆ ಅಗಲೀಕರಣವಾಗುವ ವೇಳೆ ಈ ವಿದ್ಯುತ್ ಕಂಬಗಳನ್ನು ಬೇರೆಡೆಗೆ ವರ್ಗಾಯಿಸಲು ಆದೇಶ ಮಾಡಿದ್ದರೂ ಕೂಡ ಅದನ್ನು ಮತ್ತೆ ಸರಿಯಾದ ಸ್ಥಳದಲ್ಲಿ ಹಾಕದೆ ಅಲ್ಲಿಯೇ ಬಿಟ್ಟಿದ್ದಾರೆ. ಪರಿಣಾಮವಾಗಿ ಕಂಬಗಳ ಬುಡಗಳಲ್ಲಿ ನೀರು ನಿಂತು, ಮಣ್ಣಿನ ಹಿಡಿತ ಕಳಕೊಂಡ ಕಂಬಗಳು ಬೀಳುತ್ತಿದೆ. ಇದರ ಪಕ್ಕದಲ್ಲಿ ಇನ್ನೊಂದು ವಿದ್ಯುತ್ ಲೈನ್ ಕೂಡ ಹಾದುಹೋಗಿದ್ದು, ಸಾಕಷ್ಟು ಕಂಬಗಳು ಬಿಳುವ ಸ್ಥಿತಿಯಲ್ಲಿದೆ. ಪರಿಸರದ ನಿವಾಸಿಗಳು ಇದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಇನ್ನಾದರೂ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸರಿಯಾದ ಸ್ಥಳಗಳಲ್ಲಿ ಸರಿಯಾದ ಕ್ರಮದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.






