ಮಳೆಗೆ ತಾಲೂಕಿನಲ್ಲಿ ಮೊದಲ ಮನೆ ಹಾನಿ ಪ್ರಕರಣ ದಾಖಲು

ಮಳೆಗೆ ತಾಲೂಕಿನಲ್ಲಿ ಮೊದಲ ಮನೆ ಹಾನಿ ಪ್ರಕರಣ ದಾಖಲು
Facebook
Twitter
LinkedIn
WhatsApp

ಅದೃಷ್ಟವಶಾತ್ ಐವರೂ ಅಪಾಯದಿಂದ ಪಾರು

ಬೆಳ್ತಂಗಡಿ: ಆಗಸ್ಟ್ 4 ರಂದು ಸುರಿದ ಭಾರೀ ಮಳೆಯೊಂದಿಗೆ ಬೀಸಿದ ಗಾಳಿಗೆ ಮೈಯೊಡ್ಡಿ ನಿಂತು, ತನ್ನನ್ನು ನಿರ್ಮಿಸಿದವರನ್ನು ರಕ್ಷಿಸುತ್ತಿದ್ದ ಬಡಪಾಯಿ ವ್ಯಕ್ತಿಯೋರ್ವರ ಮನೆಯೊಂದರ ಮೇಲ್ಛಾವಣಿಯು ಮಳೆಯಬ್ಬರಕ್ಕೆ ತಡೆದು ನಿಲ್ಲಲಾಗದೇ ಕುಸಿದು ಬಿದ್ಧ ದುರ್ಘಟನೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೂರು ಗ್ರಾಮದ ಪರಂಬುಡೆಯಲ್ಲಿ ಸಂಭವಿಸಿದೆ. ಈ ಸಂದರ್ಭ ಮನೆಯೊಳಗಿದ್ದ ಐವರೂ ಸುದೈವವಶಾತ್ ಅಪಾಯದಿಂದ ಪಾರಾಗಿದ್ದಾರೆ. ಈ ವರ್ಷ ಮಳೆಗೆ ಹಾನಿಗೀಡಾದ ಮೊದಲ ಮನೆ ಇದಾಗಿದ್ದು, ಇದೇ ಕೊನೆಯಾಗಲಿ ಎಂಬ ಹಾರೈಕೆ ಸ್ಥಳೀಯರದ್ದು.
ದುರ್ಘಟನೆಯಲ್ಲಿ ಮಣ್ಣಿನ ಗೋಡೆಯ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು, ಹೆಂಚುಗಳೆಲ್ಲಾ ಪುಡಿಪುಡಿಯಾಗಿದೆ. ಮನೆಯ ಯಜಮಾನ ಅಣ್ಣಿ ಆಚಾರ್ಯರ ಕೈಗೆ ಸಣ್ಣ ಪ್ರಮಾಣದ ಗಾಯವಾಗಿದೆ. ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾದೇವ ಗಡೇಗಾರ್ ಮತ್ತು ಸಿಬ್ಬಂದಿಗಳು, ಸ್ಥಳೀಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ತಾತ್ಕಾಲಿಕ ಪರಿಹಾರ ಕಾರ್ಯಕ್ಕೆ ಮುಂದಾಗಿದ್ದಾರೆ.
ದುರ್ಘಟನೆಯ ಮಾಹಿತಿ ಪಡೆದ ಶಾಸಕ ಹರೀಶ್ ಪೂಂಜಾ, ಸರಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಸದ್ಯ ಸಂತ್ರಸ್ತರಿಗೆ ಗುರುವಾಯನಕೆರೆ ನಿವಾಸಿ ಪುರುಷೋತ್ತಮ ಆಚಾರ್ಯ ಅವರ ಮುಂಡೂರಿನ ಮನೆಯಲ್ಲಿ ತಾತ್ಕಾಲಿಕ ವಾಸಕ್ಕೆ ಅವಕಾಶ ಕಲ್ಪಿಸಿ, ಮಾನವೀಯತೆ ಮೆರೆದಿದ್ದಾರೆ.

Latest News

Related Posts