ನೆಲ್ಯಾಡಿ ಜೆಸಿಐನಿಂದ ಶಿಕ್ಷಕ ದಿನಾಚರಣೆ; ನಿವೃತ್ತ ಶಿಕ್ಷಕ ಹಾಗೂ ಮಕ್ಕಳ ಸಾಹಿತ್ಯ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ರಿಗೆ ಗೌರವಾರ್ಪಣೆ.

ನೆಲ್ಯಾಡಿ ಜೆಸಿಐನಿಂದ ಶಿಕ್ಷಕ ದಿನಾಚರಣೆ; ನಿವೃತ್ತ ಶಿಕ್ಷಕ ಹಾಗೂ ಮಕ್ಕಳ ಸಾಹಿತ್ಯ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ರಿಗೆ ಗೌರವಾರ್ಪಣೆ.
Facebook
Twitter
LinkedIn
WhatsApp

ಕೊಕ್ಕಡ: ನೆಲ್ಯಾಡಿಯ ಜೆಸಿಐ ಸಂಸ್ಥೆಯ ವತಿಯಿಂದ ನೆಲ್ಯಾಡಿ ಪಡುಬೆಟ್ಟಿನ ನಿವೃತ್ತ ಶಿಕ್ಷಕ, ಸಾಹಿತ್ಯ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯರನ್ನು ಶಾಂತಿಗೋಡುನ ಪುಂಡಿಕಾಯಿ ಸ್ವಗೃಹದಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಶುಭಸಂದರ್ಭದಲ್ಲಿ ಗೌರವಪೂರ್ವಕವಾಗಿ ಸಮ್ಮಾನಿಸಲಾಯಿತು.
ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲಾ ಕನ್ನಡ ಶಿಕ್ಷಕರಾದ ಕನ್ನಡ ಪಂಡಿತರೂ ಆಗಿರುವ ವಿ.ಆರ್ .ಹೆಗಡೆಯವರು ತಮ್ನ ಅಭಿನಂದನಾ ಭಾಷಣದಲ್ಲಿ ಶಗ್ರಿತ್ತಾಯರು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸಾಧನೆ ಮತ್ತು ಶಿಕ್ಷಕರಾಗಿ ಸಮಾಜಕ್ಕೆ ನೀಡಿದ ವಿಶಿಷ್ಟ ಸೇವೆ ಇಂದಿಗೂ ಎಲ್ಲರಿಗೂ ಮಾದರಿ. ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ,ಮುಮ್ಮೇಳಗಳೆರಡರಲ್ಲೂ ಸಂಪೂರ್ಣ ಮಕ್ಕಳನ್ನೇ ಹೊಂದಿದ್ದ ಯಕ್ಷಗಾನ ತಂಡದ ಮೂಲಕ ರಾಜ್ಯ, ರಾಷ್ಟ್ರದುದ್ದಗಲಕ್ಕೂ ನಿರಂತರ ಕಾರ್ಯಕ್ರಮ ನೀಡಿ ದಾಖಲೆಯನ್ನು ಮಾಡಿರುವ ಹಿರಿಯ ಗುರುಗಳಾದ ಶಗ್ರಿತ್ತಾಯರ ಬದುಕು ಅನುಕರಣೇಯ ಎಂದರು. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಮೇಲೆ ಅಪೂರ್ವ ಪಾಂಡಿತ್ಯವನ್ನು ತಾನು ಹೊಂದಿರುವುದಲ್ಲದೇ, ಯಕ್ಷಗಾನ ಮತ್ತಿತರ ಕ್ಷೇತ್ರದಲ್ಲಿ ಇಂದು ಮಹಾನ್ ಕಲಾವಿದರಾಗಿರುವ ಅನೇಕ ಶಿಷ್ಯವೃಂದವನ್ನು ಹೊಂದಿರುವ ಶ್ರೀಯುತರು; ಶಿಕ್ಷಕರಾಗಿ ತಮ್ಮಲ್ಲಿರುವ ಅಪಾರ ಪಾಂಡಿತ್ಯವನ್ನು ಮತ್ತು ಮೌಲ್ಯಯುತ ಶಿಕ್ಷಣವನ್ನು ಶಿಷ್ಯರಿಗೆ ಧಾರೆಯೆರೆದು ನಿಜವಾದ ಅರ್ಥದಲ್ಲಿ ಆಚಾರ್ಯರಾಗಿ, ಗುರುಗಳ ಸ್ಥಾನವನ್ನೇರಿದ್ದಾರೆ. ಎಂಭತ್ತ ನಾಲ್ಕರ ಇಳಿ ವಯಸ್ಸಲ್ಲೂ ಪಾದರಸದಂತೆ ತಮ್ಮ ಇಚ್ಛಾ ಶಕ್ತಿಯನ್ನು ರೂಢಿಸಿಕೊಂಡು ಸಮಾಜಕ್ಕೆ ಪ್ರೇರಣೆ ಯಾಗಿದ್ದಾರೆ ಎಂದರು.
ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ,
ನೆಲ್ಯಾಡಿ ತಾಲೂಕು ಪಂಚಾಯತ್ ಸದಸ್ಯೆ ಉಷಾ ಅಂಚನ್ ಕಡೆಂಜಿಗುತ್ತು ಪ್ರವೀಣ್ ಕುಮಾರ್, ಜೆಸಿಐ ನೆಲ್ಯಾಡಿಯ ಕಾರ್ಯದರ್ಶಿ ಗಿರೀಶ್, ಸಿವಿಲ್ ಇಂಜಿನಿಯರ್ ಬಾಲಕೃಷ್ಣ ಪಿ. ಎಚ್., ಸರಸ್ವತೀ ಜಿ. ಶಗ್ರಿತ್ತಾಯ, ಬಾಲಚಂದ್ರ ಶಗ್ರಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಈ ಸರಳ ಸುಂದರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೆಸಿಐ ಅಧ್ಯಕ್ಷ ಶಿವಪ್ರಸಾದ್ ವಹಿಸಿದ್ದರು.
ಸನ್ಮಾನ ಸ್ವೀಕರಿಸಿದ ಶಗ್ರಿತ್ತಾಯರು ಮಾತನಾಡಿ, ನಾನು ಸನ್ಮಾನ ಜೀವನದಲ್ಲೇ ಅಪೇಕ್ಷೆ ಪಟ್ಟವನಲ್ಲ. ಊರ ಶಿಕ್ಷಕನೆಂಬ ಅಭಿಮಾನದಲ್ಲಿ ಮನೆಗೆ ಬಂದು ಗೌರವಿಸಿದ ಶಿಷ್ಯವೃಂದಕ್ಕೆಲ್ಲ ನನ್ನ ಮೇಲೆ ಇರುವ ಪ್ರೀತಿಗೆ ನಾನು ಚಿರರುಣಿ. ಬದುಕಿನ ಸಂಧ್ಯಾಕಾಲದಲ್ಲೂ ಸಾಹಿತ್ಯ ಚಟುವಟಿಕೆಗಳಲ್ಲಿ ಒಂದಷ್ಟು ತೊಡಗಿಸಿಕೊಳ್ಳುವ ಹವ್ಯಾಸ, ಯಕ್ಷಗಾನದ ಆಸಕ್ತಿಯಲ್ಲಿ ಪುರಾಣ ಗ್ರಂಥಗಳ ಅಧ್ಯಯನ ದಲ್ಲಿ ಇರುವ ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆ ನನಗೆ ಜೀವನದಲ್ಲಿ ಸಂತಸವನ್ನು ನೀಡಿದೆ. ನಲ್ವತ್ತು ವರ್ಷಗಳ ಹಿಂದಿನ ದಾಖಲೆ ಸಂಪೂರ್ಣ ಮಕ್ಕಳ ಯಕ್ಷಗಾನ ತಂಡ ಇಂದಿಗೂ ದಾಖಲೆಯಾಗಿಯೇ ಉಳಿದಿದೆ ಎನ್ನುವ ಕುರಿತು ಅತೀವ ಸಂತೃಪ್ತಿ ಇದೆ. ಅಂದಿನ ಎಲ್ಲಾ ಬಾಲಕಲಾವಿದರು ಗಳನ್ನೂ ಮುಂದಿನ ವರ್ಷ ಕರೆಸಿ ಗೌರವಿಸಬೇಕು ಎನ್ನುವ ಆಕಾಂಕ್ಷೆ ಇಟ್ಟುಕೊಂಡಿದ್ದೇನೆ. ಮನೆಯ ತನಕ ಬಂದು ಶಿಕ್ಷಕ ದಿನಾಚರಣೆಯನ್ನಯ ಆಚರಿಸಿದ ಶಿಷ್ಯವೃಂದದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದರು. ಸನ್ಮಾನಗೊಂಡ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಶಗ್ರಿತ್ತಾಯರು ಜೈ ಕನ್ನಡಮ್ಮ ಪತ್ರಿಕೆಯ ವಾರಭವಿಷ್ಯ ಅಂಕಣಕಾರರು. ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಶಗ್ರಿತ್ತಾಯ ವಂದಿಸಿದರು.

Latest News

Related Posts