ಅಪ್ರಾಪ್ತ ದಲಿತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ

Facebook
Twitter
LinkedIn
WhatsApp

ಧರ್ಮಸ್ಥಳ: ಅಪ್ರಾಪ್ತ ವಯಸ್ಸಿನ ದಲಿತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಗೆ ಕೊಲೆ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು; ಇದೀಗ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ಆರೋಪಿಗಳಿಬ್ಬರಿಗೂ ಕಾನೂನಿನ ಬೇಡಿ ತೊಡಿಸಿದ್ದಾರೆ.
ಚಾರ್ಮಾಡಿ ನಿವಾಸಿ ಅಪ್ರಾಪ್ತ ವಯಸ್ಸಿನ ದಲಿತ ಬಾಲೆಯ ತಾಯಿ ಕಳಂಜ ಗ್ರಾಮದ ಬಳ್ಕಾಜೆ ರೆಜಿಮೋನು ಎಂಬವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಕೆಲವೊಮ್ಮೆ ತಾಯಿಯೊಂದಿಗೆ ಈ ದಲಿತ ಬಾಲೆಯೂ ಕಳಂಜದ ರೆಜಿಮೋನುರ ತೋಟಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ. ಅಂತೆಯೇ ಕಳೆದ ಮೇ ತಿಂಗಳಲ್ಲಿ ಕಳಂಜದ ರೆಜಿಮೋನುರ ತೋಟಕ್ಕೆ ದಲಿತ ಬಾಲೆ ತನ್ನ ತಾಯಿಯೊಂದಿಗೆ ಹೋಗಿದ್ದ ಸಂದರ್ಭ ಆರೋಪಿ ರೆಜಿಮೋನು ಕುಡಿದು ಬಂದು ಹೊಡೆದುದಲ್ಲದೇ, ಸಮಯ ಸಾಧಿಸಿ ಬಾಲೆಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಇದರೊಂದಿಗೆ ರೆಜಿಮೋನುನ ಬಲಗೈ ಬಂಟ ಕೃಷ್ಣ ಎಂಬಾತ ಬಾಲಕಿಗೆ ಕೊಲೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ದಲಿತ ಬಾಲೆಯ ತಾಯಿ ಈ ಹಿಂದೆಯೇ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಬಾಲಕಿ ತನಗಾದ ಮಾನಸಿಕ ನೋವು ಹಾಗೂ ದೈಹಿಕ ಹಿಂಸೆಯ ವಿಚಾರವನ್ನು ತನ್ನ ಅಣ್ಣ ಹಾಗೂ ಚಿಕ್ಕಮ್ಮನ ಗಮನಕ್ಕೆ ತಂದು, ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಲಿಖಿತ‌ ದೂರು ನೀಡಿದ್ದಾರೆ. ಭಾರತೀಯ ದಂಡಸಂಹಿತೆ ಕಲಂ 354, 323, 504, 506 ಜೊತೆಗೆ 34; ಐಪಿಸಿ ಮತ್ತು ಕಲಂ 8 ಪೋಕ್ಸೋ ಕಾಯ್ದೆ 2012 ಮತ್ತು ಕಲಂ 3(1)(w)(I), 3(2)(v)(a) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ 2015 ರಂತೆ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ಆರೋಪಿಗಳಾದ ರೆಜಿಮೋನು ಹಾಗೂ ಕೃಷ್ಣನನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

Latest News

Related Posts