
ಧರ್ಮಸ್ಥಳ: ನಾಡಿನ ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮದಲ್ಲಿರುವ ಬೊಳಿಯಾರು ಪ್ರದೇಶದ ನಿವಾಸಿಗರು ಪ್ರತೀವರ್ಷ ಮಳೆಗಾಲ ಬಂತೆಂದರೆ ನದಿಯಲ್ಲಿ ನೀರು ಉಕ್ಕಿ ಬರುವ ನೆರೆಗೆ ಭಯದಿಂದಲೇ ಬದುಕುತ್ತಾ, ಪೇಟೆಯ ಸಂಪರ್ಕ ಕಳೆದುಕೊಂಡು ದ್ವೀಪ ವಾಸದ ಅನುಭವ ಪಡೆಯುತ್ತಿದ್ದಾರೆ.
ಈ ಬಾರಿಯೂ ಸೆಪ್ಟೆಂಬರ್ 19, 20ನೇ ತಾರೀಕಿನಂದು ಸುರಿದ ಭಾರೀ ಮಳೆಗೆ ನದಿಯಲ್ಲಿ ಉಕ್ಕಿ ಹರಿದ ನೀರಿನ ಪರಿಣಾಮ ಬೊಳಿಯಾರು ಪ್ರದೇಶದ ನಿವಾಸಿಗರು ಪೇಟೆ ಸಂಪರ್ಕ ಕಡಿದುಕೊಂಡು ಕಂಗಾಲಾಗಿದ್ದಾರೆ. ಇಲ್ಲಿ ಧರ್ಮಸ್ಥಳ ಪೇಟೆಗೆ ಸಂಪರ್ಕ ಕಲ್ಪಿಸುವ ಕಚ್ಛಾ ರಸ್ತೆಯಲ್ಲಿ ನದಿಗೆ ಅಡ್ಡವಾಗಿ ಕಾಲುಸಂಕ ಇದೆಯಾದರೂ, ಸುಸ್ಥಿತಿಯಲ್ಲಿಲ್ಲ. ಅನೇಕ ವರ್ಷಗಳಿಂದ ಇಲ್ಲಿನ ನಿವಾಸಿಗರು ಜನಪ್ರತಿನಿಧಿಗಳಲ್ಲಿ ಸರ್ವಋತು ರಸ್ತೆಯೊಂದಿಗೆ ನದಿಗೆ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದರೂ ಇಲ್ಲಿನ ನಿವಾಸಿಗಳ ಕೋರಿಕೆ ಅರಣ್ಯರೋಧನವಾಗಿದೆ. ಧರ್ಮಸ್ಥಳದಂತಹ ಗ್ರಾಮದಲ್ಲಿಯೇ ಜನಸಾಮಾನ್ಯರ ಸ್ಥಿತಿ ಹೀಗಾದರೆ, ತೀರಾ ಗ್ರಾಮಾಂತರದಲ್ಲಿರುವ ಹಳ್ಳಿಗಳ ರಸ್ತೆಗಳ ಕಥೆ ಏನು, ಅಲ್ಲಿನ ಜನಜೀವನ ಹ್ಯಾಗಿರಬಹುದು.. ಎಂದು ಯೋಚಿಸುವಂತಾಗಿದೆ.






