ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆ
ಬೆಳ್ತಂಗಡಿ: ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಗ್ರಾಹಕರ ಮತ್ತು ನಾಗರಿಕರ ಮೆಚ್ಚುಗೆ-ಪ್ರಶಂಸೆಗೆ ಪಾತ್ರವಾದ ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಛೇರಿಯ ನವೀಕೃತಗೊಂಡ ಕಛೇರಿಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 1ರಂದು ಬೆಳ್ತಂಗಡಿಯ ಸಿಎಸ್ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ನವೀಕೃತ ಕಛೇರಿಯನ್ನು ಉದ್ಘಾಟಿಸಿ, ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಪ್ರತಾಪ್‌ಸಿಂಹ ನಾಯಕ್‌ರನ್ನು ಅಭಿನಂದಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಿ, ಅಭಿನಂದಿಸಿ, ಪುರಸ್ಕರಿಸಲಾಯಿತು. ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಧರ್ಮಗುರು ವಂದನೀಯ ಜೋಸೆಫ್ ಅಲ್ಫೋನ್ಸ್ ಕಾರ್ಡೋಜಾ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಎಲೋಶಿಯಸ್ ಲೋಬೋರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಅತ್ತೂಸ್ ವೇಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಜೋನ್ ಅರ್ವಿನ್ ಡಿ’ಸೋಜಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್, ಸಂಘದ ನಿರ್ದೇಶಕರುಗಳು, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಮತ್ತು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







