ಬೆಳ್ತಂಗಡಿ: ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ ಹಿಂಡಿನಲ್ಲಿದ್ದ ಆನೆಮರಿಯೊಂದು ಹಿಂದೆ ಹೋಗಲು ದಾರಿ ಕಾಣದೇ ತೋಟದಲ್ಲಿ ಸಿಲುಕಿಕೊಂಡ ಘಟನೆ ಅಕ್ಟೋಬರ್ 29ರಂದು ರಾತ್ರಿ ಕಡಿರುದ್ಯಾವರದಲ್ಲಿ ನಡೆದಿದೆ.
ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ತಿಂದು ಸಂಪೂರ್ಣ ನಾಶಗೊಳಿಸಿದ್ದು, ನಂತರ ತೋಟದಿಂದ ಕಾಡಿಗೆ ಮರಳುವ ಸಮಯದಲ್ಲಿ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಸಿಲುಕಿದ ಪ್ರಕರಣ ಬೆಳಕಿಗೆ ಬಂದಿದೆ. ತೋಟದಲ್ಲಿ ಮರಿಯಾನೆ ಸಿಲುಕಿಕೊಂಡಿದ್ದರಿಂದ ಆನೆಗಳ ಹಿಂಡು ತೋಟದ ಸಮೀಪದ ಕಾಡಿನಲ್ಲಿ ಬೀಡುಬಿಟ್ಟಿತ್ತು.

ಬೆಳಗ್ಗೆ ಡೀಕಯ್ಯ ಗೌಡರವರು ತೋಟಕ್ಕೆ ಭೇಟಿ ನೀಡಿದ ಸಂದರ್ಭ ತೋಟದಲ್ಲಿ ಮರಿಯಾನೆ ಕಂಡು ಗಾಬರಿಗೊಂಡು, ತಕ್ಷಣ ಅರಣ್ಯ ಇಲಾಖೆಗೆ ವಿಚಾರ ತಿಳಿಸಿದ್ದಾರೆ. ಆನೆಮರಿಯನ್ನು ನೋಡಲು ಹಲವಾರು ಮಂದಿ ಜನ ಸಮೂಹವೇ ಸೇರಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿಗಳು ಸೂಕ್ತ ಕಾರ್ಯಾಚರಣೆ ನಡಿಸಿ ಮರಿ ಆನೆಯನ್ನು ಹಿಡಿದು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.






