ಇವರಿಗೆ ಪ್ರಧಾನಿ ಮೋದಿ ಆದರ್ಶನಾ…? ಮಾಸ್ಕ್ ಧರಿಸದೇ ಇನ್ನೊಂದು ಹೈಮಾಸ್ಕ್ ದೀಪ ಉದ್ಘಾಟನೆ

ಇವರಿಗೆ ಪ್ರಧಾನಿ ಮೋದಿ ಆದರ್ಶನಾ…? ಮಾಸ್ಕ್ ಧರಿಸದೇ ಇನ್ನೊಂದು ಹೈಮಾಸ್ಕ್ ದೀಪ ಉದ್ಘಾಟನೆ
Facebook
Twitter
LinkedIn
WhatsApp

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಕರಾಯ ಗ್ರಾಮದ ಶ್ರೀ ಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ನವೆಂಬರ್ 3ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು.‌ ಕಳೆದ ವಾರ ಸುಲ್ಕೇರಿಮೊಗ್ರು ದೈವಸ್ಥಾನದಲ್ಲಿ ನಡೆದಂತೆ ಇಲ್ಲೂ ಕೂಡಾ ಮಾಸ್ಕ್ ಧರಿಸದೇ ಬಹುತೇಕರು ಹೈಮಾಸ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೊರೋನಾ ಸೋಂಕಿಗೆ ಸವಾಲು ಹಾಕಿದರು.ಬಹಳ ವಿಶೇಷವೆಂದರೆ ಹೇಳಿಕೇಳಿ ಈ ಕಾರ್ಯಕ್ರಮಗಳಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಶಾಸಕ ಹರೀಶ್ ಪೂಂಜಾರ ಸಹಿತ ಬಹುತೇಕರು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಹಿಂಬಾಲಕರು. ಪ್ರಧಾನಿ ಮೋದಿಯವರನ್ನು ತಮ್ಮ ಪರಮೋಚ್ಛ ನಾಯಕ ಎಂದು ಬಹಿರಂಗವಾಗಿ ಬೊಬ್ಬಿರಿಯುವವರು. ಮೊನ್ನೆ ತಾನೆ ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತ್ರಕ್ಕೆ ಯಾರೂ ಮೈಮರೆಯಬೇಡಿ; ಯಾವುದೇ ಕಾರಣಕ್ಕೂ ಮಾಸ್ಕ್ ಧಾರಣೆ-ಸಾಮಾಜಿಕ ಅಂತರ ಸಹಿತ ಸುರಕ್ಷತಾ ಕ್ರಮಗಳ ಪಾಲನೆ ನಿಲ್ಲಿಸದಿರಿ. ಕೊರೋನಾ ವಿರುದ್ಧ ಎಲ್ಲ ಸುರಕ್ಷತಾ ಕ್ರಮಗಳನ್ನು ಹೆಚ್ಚಿನ ಜಾಗ್ರತೆಯಿಂದ ಪಾಲಿಸಿ, ದೇಶದಿಂದ ಕೊರೋನಾವನ್ನು ಓಡಿಸಲು ಸರಕಾರದೊಂದಿಗೆ ಎಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದ್ದರು.ನೀವೇ ಯೋಚಿಸಿ, ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿಯಾದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಸಹಿತ ಬಹುತೇಕರು ಹೈಮಾಸ್ಕ್ ದೀಪ ಉದ್ಘಾಟನೆ ಸಹಿತ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ ಕಾಪಾಡದೇ ಭಾಗವಹಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿಗೆ ಮಾಡುವ ಅವಮಾನವಲ್ಲವೇ..? ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಿಗೆ ಸವಾಲು ಹಾಕಿ; ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ ಕಾಪಡದೇ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯನ್ನು ಧಿಕ್ಕರಿಸುವ ಇಂತಹವರಿಗೋ ಪ್ರಧಾನಿ ನರೇಂದ್ರ ಮೋದಿ ಆದರ್ಶ ಎಂದರೆ ಇವರೆಲ್ಲರೂ ‘ಶಾಸ್ತ್ರ ಹೇಳಲಿಕ್ಕೆ, ಬದನೆಕಾಯಿ ತಿನ್ನಲಿಕ್ಕೆ’ ಎಂಬ ಕುಟಿಲ ನೀತಿಯ ಪರಿಪಾಲಕರು ಎಂದು ಅರ್ಥೈಸಬೇಕಾಗುತ್ತದೆ.

Latest News

Related Posts