ಮಾರೂರಿನಲ್ಲಿ ಮದ್ಯದಂಗಡಿಗೆ ಪರವಾನಿಗೆ -ಅಧಿಕಾರಿಗಳ ಬೆವರಿಳಿಸಿದ ಕಾಂಗ್ರೆಸ್ ಪ್ರತಿಭಟನೆ

ಮಾರೂರಿನಲ್ಲಿ ಮದ್ಯದಂಗಡಿಗೆ ಪರವಾನಿಗೆ -ಅಧಿಕಾರಿಗಳ ಬೆವರಿಳಿಸಿದ ಕಾಂಗ್ರೆಸ್ ಪ್ರತಿಭಟನೆ
Facebook
Twitter
LinkedIn
WhatsApp

ಮೂಡುಬಿದಿರೆ: ಇಲ್ಲಿನ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರ ಆಪ್ತರೊಬ್ಬರಿಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರೂರಿನಲ್ಲಿ ಎಂ.ಎಸ್.ಐ.ಎಲ್. ಪರವಾನಿಗೆಯ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನೇತೃತ್ವದಲ್ಲಿ ಇಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಜನವರಿ 22ರ ಬೆಳಿಗ್ಗೆ 10-30ಕ್ಕೆ ಸರಿಯಾಗಿ ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಿ, ನಮ್ಮ ಮನವಿ ಸ್ವೀಕರಿಸಿ ಎಂದು ತಹಶಿಲ್ದಾರರಿಗೆ ಮೊದಲೇ ತಿಳಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ತಾಲೂಕು ಕಚೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಸುಮಾರು ಒಂದೂವರೆ ಗಂಟೆ ಕಾಲ ಪ್ರತಿಭಟನೆ ನಡೆದರೂ ತಹಶೀಲ್ದಾರರಾಗಲೀ ಅಥವಾ ತಾಲೂಕು ಕಚೇರಿಯ ಜವಾಬ್ದಾರಿ ಸ್ಥಾನದಲ್ಲಿರುವ ಇತರ ಅಧಿಕಾರಿಗಳಾಗಲೀ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಆಗಮಿಸಲಿಲ್ಲ. ಉಪ ತಹಶಿಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಕಚೇರಿಯ ಒಳಗಿದ್ದರೂ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರಿಂದ ಮನವಿ ಸ್ವೀಕರಿಸಲು ಹೊರ ಬರಲಿಲ್ಲ. ಇದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲೂಕು ಕಚೇರಿ ಸಿಬ್ಬಂದಿಗಳ ವಿರುದ್ಧ ಅವಾಚ್ಯ ಶಬ್ದಗಳ ನಿಂದನೆಯೂ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮಾಹಿತಿ ಪಡೆದ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ತಕ್ಷಣ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸುವ ಪ್ರಯತ್ನ ನಡೆಸಿದರು. ತಾಲೂಕು ಕಚೇರಿ ಅಧಿಕಾರಿಗಳಿಂದ ಆಗಿರುವ ಪ್ರಮಾದದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ರೇ ಬಹಿರಂಗ ಕ್ಷಮೆಯನ್ನೂ ಯಾಚಿಸಿದರು. ಆ ಹೊತ್ತಿಗೆ ಕಚೇರಿಯಿಂದ ಹೊರಬಂದ ಉಪ ತಹಶೀಲ್ದಾರ್ ಪ್ರತಿಭಟನಾಕಾರರ ಮುಂದೆ ನಿಂತು ಮನವಿ ಸ್ವೀಲರಿಸುವ ಧೈರ್ಯವನ್ನೂ ತೋರದೆ ಮರೆಯಲ್ಲಿಯೇ ನಿಂತುಕೊಂಡರು. ಆದರೆ ಪಟ್ಟು ಸಡಿಲಿಸದ ಕಾಂಗ್ರೆಸ್ ಕಾರ್ಯಕರ್ತರು ‘ರಾಜ್ಯ ಸರಕಾರದಲ್ಲಿ ಈ ಹಿಂದೆ ಮಂತ್ರಿಯಾಗಿದ್ದವರ ಮಾತಿಗೇ ಬೆಲೆಕೊಡದ ತಾಲೂಕು ಕಚೇರಿ ಸಿಬ್ಬಂದಿ ಜನ ಸಾಮಾನ್ಯರ ಕೆಲಸವನ್ನು ಹೇಗೆ ಮಾಡಿಯಾರು’ ಎಂದು ಆವಾಜ್ ಹಾಕುತ್ತಾ ಸ್ಥಳದಿಂದ ಕದಲದೆ ಕುಳಿತರು. ಕೆಲ ಹೊತ್ತಿನ ನಂತರ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರಿಂದ ಮನವಿ ಸ್ವೀಕರಿಸಿದರು. ಇಷ್ಟೆಲ್ಲಾ ಪ್ರತಿಭಟನೆ ನಡೆದರೂ ಮದ್ಯಮುಕ್ತ ಮಾರೂರಿನಲ್ಲಿ ಮದ್ಯದಂಗಡಿ ತೆರೆಯುವ ಭಂಡತನ ತೋರಿಸಿದರೆ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಸ್ಥಳದಿಂದ ತೆರಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಮೂಡಾ ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ರತ್ನಾಕರ ಸಿ. ಮೊಯ್ಲಿ, ವಾಸುದೇವ ಪಿ. ನಾಯಕ್, ಮಾರೂರುಗುತ್ತು ಶಂಭು ಎನ್. ಶೆಟ್ಟಿ, ಶಂಕರ ಎ. ಕೋಟ್ಯಾನ್ ಮಾರೂರು, ಸುಶಾಂತ್ ಕರ್ಕೇರಾ, ಪುರಸಭಾ ಸದಸ್ಯರಾದ ಜೊಸ್ಸಿ ಮಿನೇಜಸ್, ಪುರಂದರ ದೇವಾಡಿಗ, ಇಕ್ಬಾಲ್ ಕರೀಂ, ಕಾಂಗ್ರೆಸ್ ನಾಯಕರಾದ ಸತೀಶ್ ಭಂಡಾರಿ ಕರಿಂಜೆ, ರಾಘು ಪೂಜಾರಿ, ಶಿವಾನಂದ ಪೂಜಾರಿ, ರಾಜೇಶ್ ಕಡಲಕೆರೆ, ಅರುಣ್ ಕುಮಾರ್ ಶೆಟ್ಟಿ, ಶಿವಾನಂದ ಪಾಂಡ್ರು, ಪ್ರವೀಣ್ ಕುಮಾರ್ ಶಿರ್ತಾಡಿ, ಸರಸ್ವತಿ ಶೆಟ್ಟಿ ಮಾರೂರು, ಮೇರಿ ಪಿರೇರಾ, ಫೆಲಿಕ್ಸ್ ಡಿಸೋಜ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Latest News

Related Posts