ಗಬ್ಬೆದ್ದು ನಾರುತ್ತಿರುವ ಕರಿಂಜೆ ಕಸ ವಿಲೇವಾರಿ ಘಟಕ

ಗಬ್ಬೆದ್ದು ನಾರುತ್ತಿರುವ ಕರಿಂಜೆ ಕಸ ವಿಲೇವಾರಿ ಘಟಕ
Facebook
Twitter
LinkedIn
WhatsApp

ಮೂಡುಬಿದಿರೆ: ಮೂಡುಬಿದಿರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಸ್ಥಳೀಯ ಪುರಸಭೆ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ನಡೆಯುತ್ತಿದೆ. ಜವಾಬ್ದಾರಿಯನ್ನು ಮರೆತಿರುವ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಒಳ್ಳೆಯ ಉದ್ದೇಶವಿಟ್ಟು ಸ್ಥಾಪಿಸಲಾಗಿರುವ ಕರಿಂಜೆಯ ಕಸ ವಿಲೇವಾರಿ ಘಟಕ ಗಬ್ಬೆದ್ದು ನಾರುತ್ತಿದ್ದು, ಪರಿಸರದಲ್ಲಿ ವಾಸಿಸುವ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯನ್ನೆದುರಿಸುತ್ತಿದ್ದಾರೆ. ಹಲವು ದಿನಗಳಿಂದ ಕರಿಂಜೆ ಕಸ ವಿಲೇವಾರಿ ಘಟಕದ ಸುತ್ತಲಿನ ಪ್ರದೇಶದಲ್ಲಿ ಕಸದ ರಾಶಿ ತಂದು ಹಾಕಲಾಗುತ್ತಿದೆ. ಈ ಪರಿಸರ ದುರ್ವಾಸನೆಯಿಂದ ತುಂಬಿದ್ದು ಈ ಪರಿಸರದಲ್ಲಿ ವಾಸಿಸುವ ಜನ ಮೂಗು ಮುಚ್ಚಿ ತಿರುಗುವಂತಾಗಿದೆ. ಈ ಬಗ್ಗೆ ಪುರಸಭೆಗೆ ಹಲವು ದಿನಗಳಿಂದ ದೂರು ನೀಡಿದರೂ ಕೇಳುವ ವರಿಲ್ಲದಂತಾಗಿತ್ತು. ಸ್ಥಳೀಯ ನಿವಾಸಿಯೊಬ್ಬರು ವಾರ್ಡ್ ಸದಸ್ಯೆ ಜಯಶ್ರೀ ಕೇಶವ್ ಅವರಿಗೆ ದೂರು ನೀಡಿ ವಿನಂತಿಸಿದ ಫಲವಾಗಿ ಪುರಸಭಾ ಆಡಳಿತ ಯಂತ್ರ ಜನವರಿ 29ರಂದು ಹಠಾತ್ತನೆ ಕರಿಂಜೆ ಕಸ ವಿಲೇವಾರಿ ಘಟಕದ ಕಡೆಗೆ ಧಾವಿಸಿದೆ. ಅಧಿಕಾರಿಗಳು ಮತ್ತು ಪುರಸಭಾಧ್ಯಕ್ಷರ ಭೇಟಿಯ ವಿಷಯ ತಿಳಿದ ಸ್ಥಳೀಯ ಸಮಾಜ ಸೇವಕ ಸತೀಶ್ ಭಂಡಾರಿ ಮತ್ತು ಹಿರಿಯ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಅವರೂ ಕರಿಂಜೆಗೆ ದೌಡಾಯಿಸಿದ್ದಾರೆ. ಕಸದ ರಾಶಿಯ ಬಳಿಯೇ ಎಲ್ಲರ ಮುಖಾಮುಖಿಯಾಗಿದೆ.

ಈ ಸಂದರ್ಭ ಮೂಡುಬಿದಿರೆ ಪುರಭೆಯಲ್ಲಿ ಕಸ ವಿಲೇವಾರಿ ಘಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪರಿಸರ ಇಂಜಿನಿಯರ್ ಶಿಲ್ಪಾ ಅವರನ್ನು ಸತೀಶ್ ಭಂಡಾರಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ. ಪರಿಸರ ಇಂಜಿನಿಯರ್ ಅವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಈ ದುರವಸ್ಥೆಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.10ದಿನಗಳ ಒಳಗಾಗಿ ಈ ಪರಿಸರವನ್ನು ಕಸ ಮುಕ್ತಗೊಳಿಸಲಾಗುವುದು. ಜನವರಿ 30ರಂದು ನಡೆಯುವ ಪುರಸಭೆ ಅಧಿವೇಶನದಲ್ಲಿ ಇದಕ್ಕಾಗಿ ವಿಶೇಷ ಫಂಡನ್ನು ಇಡಲಾಗುವುದು ಎಂದು ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರು ಆಶ್ವಾಸನೆ ನೀಡಿದ ಬಳಿಕ ಸತೀಶ್ ಭಂಡಾರಿ ಸಮಾಧಾನಗೊಂಡರು. ಮುಖ್ಯಾಧಿಕಾರಿ ಇಂದು ಎಂ. ಮತ್ತಿತರ ಪುರಸಭೆ ಅಧಿಕಾರಿಗಳು ಕರಿಂಜೆಯ ಚಂದ ವೀಕ್ಷಿಸಲು ಆಗಮಿಸಿದ್ದರು.

Latest News

Related Posts