ಶಾಲೆಗಳು ಕ್ವಾರಂಟೈನ್ ಸೆಂಟರ್-ಪೂಂಜ

ಶಾಲೆಗಳು ಕ್ವಾರಂಟೈನ್ ಸೆಂಟರ್-ಪೂಂಜ
Facebook
Twitter
LinkedIn
WhatsApp

ಶಾಲಾಗಳು ಕ್ವಾರಂಟೈನ್ ಸೆಂಟರ್-ಪೂಂಜಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಅಲೆ ಹರಡುವಿಕೆ ತಡೆಯಲು ಸಮರೋಪಾದಿಯಲ್ಲಿ ಸರಕಾರಿ ಯಂತ್ರವನ್ನು ಕಾರ್ಯಾಚರಣೆಗೆ ಇಳಿಸಲು ಮುಂದಾಗಿರುವ ಶಾಸಕ ಹರೀಶ್ ಪೂಂಜ; ಇದೀಗ ಬೆಂಗಳೂರು ಸಹಿತ ಪರವೂರುಗಳಲ್ಲಿ ಉದ್ಯೋಗದಲ್ಲಿದ್ದು, ಲಾಕ್‌ಡೌನ್ ಸಂದರ್ಭ ತಾಲೂಕಿನ ಹಳ್ಳಿಗಳಿಗೆ ಬರಲಿರುವ ವ್ಯಕ್ತಿಗಳು ಒಂದು ವಾರ ಕಾಲ ತಮ್ಮತಮ್ಮ ಊರುಗಳ ಶಾಲೆಯಲ್ಲಿ ಕ್ವಾರಂಟೈನ್‌ಗೊಳಗಾಗುವ ಮೂಲಕ ತಾಲೂಕಿನ ಹಳ್ಳಿಗಳಲ್ಲಿ ಕೊರೋನಾ ಹರಡುವಿಕೆ ತಡೆಯಲು ತಾಲೂಕು ಆಡಾಳಿತದೊಂದಿಗೆ ಸಹಕರಿಸಲು ಕೋರಿದ್ದಾರೆ. ಎಪ್ರಿಲ್ 27ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಶಾಸಕ ಪೂಂಜ, ಲಾಕ್‌ಡೌನ್ ಸಂದರ್ಭ ಬೆಂಗಳೂರು ಸಹಿತ ಪರವೂರುಗಳಿಂದ ಬರುವ ನಮ್ಮ ತಾಲೂಕಿನ ಬಂಧುಗಳು ತಮ್ಮತಮ್ಮ ಊರುಗಳ ವ್ಯವಸ್ಥೆಗೊಳಿಸಲಾಗಿರುವ ಶಾಲೆಗಳಲ್ಲಿ ಸ್ವಯಂ ಕ್ವಾರಂಟೈನ್‌ಗೊಳಗಾಗಿ ಸಹಕರಿಸಬೇಕೆಂದು ವಿನಂತಿಸಿದರು. ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು, ಎಲ್ಲ ಶಾಲಾ ಮುಖ್ಯ ಶಿಕ್ಷಕರು, ಗ್ರಾಮ ಲೆಕ್ಕಿಗರು, ಪೊಲೀಸರು ಹಾಗೂ ಇತರ ಅಧಿಕಾರಿಗಳಿಗೆ ಈ ಬಗ್ಗೆ ವ್ಯವಸ್ಥೆಗೆ ಸೂಚಿಸಲಾಗಿದೆ. ಶಾಲೆಗಳಲ್ಲಿ ಕ್ವಾರಂಟೈನ್‌ಗೊಳಗಾದವರು ಊಟ-ತಿಂಡಿಯನ್ನು ಅವರವರ ಮನೆಯಿಂದ ಪೂರೈಸಿಕೊಳ್ಳಬಹುದು. ಒಂದು ವಾರದ ಬಳಿಕ ಅವರನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಿ, ನೆಗೆಟಿವ್ ಖಚಿತ ಪಡಿಸಿಕೊಂಡು ಮನೆಗೆ ತೆರಳಲು ಅವಕಾಶ ಕಲ್ಪಿಸಲಾಗುವುದು ಎಂದರಲ್ಲದೇ; ನಮ್ಮೂರಿನ ಹಿತದೃಷ್ಠಿಯಿಂದ, ನಮ್ಮ ತಾಲೂಕಿನ ಜನತೆಯನ್ನು ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೈಗೊಂಡಿರುವ ಈ ವ್ಯವಸ್ಥೆಗೆ ಊರಿಗೆ ಮರಳಲಿರುವ ಪರವೂರ ಬಂಧುಗಳ ಹಾಗೂ ಅವರ ಮನೆಯವರ ಸಹಕಾರ ಕೋರಿದರು.ತಾಲೂಕಿನಲ್ಲಿ ನಾಳೆಯೇ ಕೋವಿಡ್ ಸಹಾಯವಾಣಿ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದ ಶಾಸಕ ಪೂಂಜ; ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಾಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸರ್ವರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದು, ಅಗತ್ಯ ಬಿದ್ದರೆ ಉಜಿರೆಯ ಟಿ‌. ಬಿ. ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.ತಾಲೂಕಿನಲ್ಲಿ 60ಲಕ್ಷ ರೂಪಾಯಿ ವೆಚ್ಚದಲ್ಲಿ ಲಿಕ್ವಿಡ್ ಆಕ್ಸಿಜನ್ ಸೆಂಟರ್ ತೆರೆಯಲು ಮಂಜೂರಾತಿ ದೊರೆತಿದ್ದು, ಆದಷ್ಟು ಶೀಘ್ರವಾಗಿ ಈ ಸೆಂಟರ್ ಕಾರ್ಯಾಚರಿಸಲಿದೆ ಎಂದ ಶಾಸಕ ಪೂಂಜ, ತಾಲೂಕಿನಲ್ಲಿ ಕೊರತೆ ಖಾಲಿ ಇರುವ ವೈದ್ಯರ ಮತ್ತು ದಾದಿಯರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿ ಸೇವೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕೊರೋನಾ ನಿಯಂತ್ರಣಕ್ಕೆ ತಾಲೂಕಿನ ಸಮಗ್ರ ನಾಗರಿಕರ ಸಹಕಾರವನ್ನು ಶಾಸಕ ಪೂಂಜ ಇದೇ ಸಂದರ್ಭದಲ್ಲಿ ಕೋರಿದರು.

Latest News

Related Posts