ಕಾರ್ಮಿಕ ವಿರೋಧಿ ಕೇಂದ್ರ ಸರಕಾರದ ವಿರುದ್ಧ ಸಂಘಟಿತ ಹೋರಾಟ ಅಗತ್ಯ;ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಎಸ್.ಎಂ.ಎಸ್.

ಕಾರ್ಮಿಕ ವಿರೋಧಿ ಕೇಂದ್ರ ಸರಕಾರದ ವಿರುದ್ಧ ಸಂಘಟಿತ ಹೋರಾಟ ಅಗತ್ಯ;ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಎಸ್.ಎಂ.ಎಸ್.
Facebook
Twitter
LinkedIn
WhatsApp

ಬೆಳ್ತಂಗಡಿ: ಬಿಜೆಪಿ ನೇತೃತ್ವದ ನರೇಂದ್ರ ಮೋದಿಯ ಸರ್ವಾಧಿಕಾರಿ ಆಡಳಿತ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುವ ಮೂಲಕ ದೇಶದ ರೈತ- ಕಾರ್ಮಿಕರು ನರಕಯಾತನೆ ಅನುಭವಿಸುವಂತಾಗಿದೆ. ಇದರ ವಿರುದ್ಧ ರೈತ ಹಾಗೂ ಕಾರ್ಮಿಕರ ಐಕ್ಯತೆಯ-ಸಂಘಟಿತ ಹೋರಾಟ ಅಗತ್ಯವಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್. ಎಂ. ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.ಬೆಳ್ತಂಗಡಿಯ ಅನನ್ಯದಲ್ಲಿ ಮೇ 1ರಂದು ಅತ್ಯಂತ ಸರಳವಾಗಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಕೇಂದ್ರದ ಬಿಜೆಪಿ ಸರ್ಕಾರ ಮೇ ದಿನಾಚರಣೆಯ ಮೂಲ ಆಶಯವನ್ನು ಮರೆತು ದಿನಕ್ಕೆ 12ರಿಂದ 16ಘಂಟೆ ದುಡಿಸುವ ಮೂಲಕ ಅಮಾನವೀಯತೆ ಪ್ರದರ್ಶಿಸುತ್ತಿದೆ. ರೈತ-ಕಾರ್ಮಿಕರ ಪರವಾದ ಕಾನೂನುಗಳನ್ನು ಬಂಡವಾಳಶಾಹಿ-ಮಾಲೀಕರ ಪರವಾಗಿ ಸುಗ್ರೀವಾಜ್ಞೆ ಮೂಲಕ ಬದಲಾವಣೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಂಡವಾಳಶಾಹಿ, ಮಾಲೀಕರ ಏಜೆಂಟ್‌‌ನಂತೆ ವರ್ತಿಸುತ್ತಿದೆ ಎಂದರು. ದೇಶದಲ್ಲಿ ಜನರು ರಸ್ತೆ ಮಧ್ಯೆ ಒದ್ದಾಡಿ ಜೀವ ಬಿಡುತ್ತಿದ್ದರೂ ಕೇಂದ್ರ ಸರ್ಕಾರದ ಸಚಿವರುಗಳು‌ ಮೌನವಹಿಸುತ್ತಿರುವುದು ಅಮಾನವೀಯತೆಯ ಪ್ರತೀಕ ಎಂದರು ‌.ಸಿಐಟಿಯು ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಶೇಖರ್ ಎಲ್. ಮಾತನಾಡಿ, ಕೋರೋನಾ ಲಾಕ್ ಡೌನ್ ಹೆಸರಿನಲ್ಲಿ ದೇಶದ ಜನತೆಯನ್ನು ಕತ್ತಲೆಯಲ್ಲಿಟ್ಟು ಸುಗ್ರೀವಾಜ್ಞೆ ಮೂಲಕ ರೈತ- ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡಿ ಅತ್ಯಂತ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸತ್ತಿದೆ. ಕಳೆದ 6 ತಿಂಗಳುಗಳಿಂದ ರೈತ ವಿರೋಧಿ ಕಾನೂನುಗಳ ವಿರುದ್ಧ ರೈತ -ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ನರಸತ್ತವರಂತೆ ವರ್ತಿಸುತ್ತಿದೆ ಎಂದ ಅವರು ಈ ಸರ್ಕಾರ ಜರ್ಮನಿಯ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದರು. ರೈತರು ಹಾಗೂ ಕಾರ್ಮಿಕರು ಒಂದಾದರೆ ಸರ್ಕಾರ ನಡೆಸುವವರು ಮನೆಗೆ ತೆರಳಬೇಕಾದೀತು ಎಂದು ಎಚ್ಚರಿಸಿದರು.ಹಿರಿಯ ರೈತ-ಕಾರ್ಮಿಕ ಮುಖಂಡ ಹರಿದಾಸ್ ಎಸ್. ಎಂ. ಮಾತನಾಡಿ, ಬೆವರು ಸುರಿಸಿ ದುಡಿಯುವ ವರ್ಗಕ್ಕೆ ನ್ಯಾಯ ಸಿಗುವ ತನಕ‌ ರೈತ- ಕಾರ್ಮಿಕರು ಒಗ್ಗಟ್ಟನಿಂದ‌ ಹೋರಾಟ ಮಾಡಬೇಕಾಗಿದೆ. ಹೋರಾಟದಿಂದ ಮಾತ್ರ ದುಡಿಯುವ ವರ್ಗಕ್ಕೆ ನೆಮ್ಮದಿ ಸಾಧ್ಯ. ಜಗತ್ತಿನಾದ್ಯಂತ ಕಾರ್ಮಿಕ ವರ್ಗದ ಪರವಾಗಿ ದುಡಿದು ಹುತಾತ್ಮರಾದ ಅಸಂಖ್ಯಾತ ಜನರ ತ್ಯಾಗ ಎಂದಿಗೂ ವ್ಯರ್ಥವಾಗದಂತೆ ದುಡಿಯಬೇಕು ಎಂದರು.ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡರಾದ ನ್ಯಾಯವಾದಿ ಸುಕನ್ಯಾ ಹರಿದಾಸ್, ಮಾಲಿನಿ ಕೈಕಂಬ, ಯುವಜನ ಮುಖಂಡರಾದ ಸುಜೀತ್ ಉಜಿರೆ, ಆಶಾ ಸುಜೀತ್, ಭಾರತಿ ಬೆಳ್ತಂಗಡಿ, ಭರತ್ ಕುಮಾರ್ ಬೆಳ್ತಂಗಡಿ ಉಪಸ್ಥಿತರಿದ್ದರು.

Latest News

Related Posts