ಧರ್ಮಸ್ಥಳ ಸೊಸೈಟಿ ಸಿಇಒ ಅಸಹಜ ಸಾವು?ಸಮಗ್ರ ತನಿಖೆಗೆ ಬಂಗೇರ ಒತ್ತಾಯ

ಧರ್ಮಸ್ಥಳ ಸೊಸೈಟಿ ಸಿಇಒ ಅಸಹಜ ಸಾವು?ಸಮಗ್ರ ತನಿಖೆಗೆ ಬಂಗೇರ ಒತ್ತಾಯ
Facebook
Twitter
LinkedIn
WhatsApp

ಬೆಳ್ತಂಗಡಿ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಮೇ 4ರಂದು ಸಂಘದ ಸಭಾಂಗಣದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು; ಇವರ ಈ ಅಸಹಜ ಸಾವಿಗೆ ಸಂಘದ ಆಡಳಿತ ಮಂಡಳಿಯ ಇಬ್ಬರು ಸದಸ್ಯರು ನೀಡಿದ ಮಾನಸಿಕ‌ ಕಿರುಕುಳವೇ ಕಾರಣ ಎಂದು ಆರೋಪಿಸಿರುವ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.ಅವರು ಮೇ 5ರಂದು ಬೆಳ್ತಂಗಡಿಯ ಶ್ರಿ ಗುರುನಾರಾಯಣ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ; ಸಂಘದ ನಿರ್ದೇಶಕರಾದ ಜಯರಾಮ್ ಭಂಡಾರಿ ಹಾಗೂ ರಘುಚಂದ್ರ ರಾವ್ ನೀಡುತ್ತಿದ್ದ ಕಿರುಕುಳದ ಬಗ್ಗೆ ರವೀಂದ್ರನ್ ತನ್ನ ಡೆತ್‌ನೋಟ್‌ನಲ್ಲೂ ನಮೂದಿಸಿದ್ದಾರೆ. ಪೊಲೀಸರು ಈ ಡೆತ್‌ನೋಟ್ ಬಗ್ಗೆ ಮಾಹಿತಿಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೇ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ರವೀಂದ್ರನ್‌ರ ಸಾವಿಗೆ ಕಾರಣರಾದ ಸಂಘದ ನಿರ್ದೇಶಕರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರಲ್ಲದೇ, ಈ ಪ್ರಕರಣದಲ್ಲಿ ನ್ಯಾಯ ಸಿಗದಿದ್ದಲ್ಲಿ ಅಥವಾ ಪೊಲೀಸರು ಒತ್ತಡಕ್ಕೆ ಒಳಗಾಗಿ ತನಿಖೆಯ ದಿಕ್ಕು ತಪ್ಪಿಸಿ ಪ್ರಕರಣವನ್ನು‌ ಮುಚ್ಚಿ ಹಾಕಲು ಹೊರಟಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸಂಘಟಿತವಾಗಿ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳುದಂದೆಯ ಬಗ್ಗೆಯೂ ಪ್ರಸ್ತಾಪಿಸಿದ ಮಾಜಿ ಶಾಸಕ ವಸಂತ ಬಂಗೇರ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರೇ ಮರಳು ಕಳ್ಳತನದಲ್ಲಿ ನಿರತರಾಗಿದ್ದು, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಮರಳು ಕಳ್ಳರ ಜೊತೆ ಶಮೀಲಾಗಿ ಮಾಮೂಲಿ ಪಡೆದು ಅಕ್ರಮ ಮರಳುಗಾರಿಕೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ಕೋವಿಡ್ ನಿರ್ವಹಣೆಯಲ್ಲೂ ಸರಕಾರಿ ಯಂತ್ರವನ್ನು ಸರಿಯಾಗಿ ಬಳಸುವಲ್ಲಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ, ಕೋವಿಡ್ ತಡೆಗೆ ಯಾವುದೇ ಮುಂಜಾಗ್ರತೆ ವಹಿಸಿಲ್ಲ, ಸರಕಾರ ಸೂಚಿಸಿದ ಮುಂಜಾಗ್ರತಾ ಕ್ರಮಗಳನ್ನೂ ಜ್ಯಾರಿಗೆ ತರಲಾಗುತ್ತಿಲ್ಲ ಎಂದು ಬಂಗೇರ ಇದೇ ಸಂದರ್ಭದಲ್ಲಿ ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಜನ್ ಜಿ. ಗೌಡ, ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಜೆಡಿಎಸ್ ನಾಯಕಿ ಸಿಂಧೂದೇವಿ, ಕಮ್ಯೂನಿಸ್ಟ್ ನಾಯಕ ಶೇಖರ್ ಲಾಯ್ಲ, ಕಾಂಗ್ರೇಸ್ ಪಕ್ಷದ ಪ್ರಮುಖರಾದ ಗ್ರೇಸಿಯನ್ ವೇಗಸ್, ವಸಂತ ಬಿ. ಕೆ., ಅನಿಲ್ ಪೈ, ಮನೋಹರ್ ಇಳಂತಿಲ ಉಪಸ್ಥಿತರಿದ್ದರು.

Latest News

Related Posts