ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ಹೆಸರಿನಲ್ಲಿ ರಾಜ್ಯ ಸರಕಾರ ಅತ್ಯಂತ ಬೇಜವ್ದಾರಿತನದಿಂದ ವರ್ತಿಸುತ್ತಿದೆ. ರಾಜ್ಯದ ಬಡಜನರಿಗೆ ಸೂಕ್ತ ರೀತಿಯ ಸಾಮಾಜಿಕ ಭದ್ರತಾ ಕ್ರಮಗಳನ್ನು ಕೈಗೊಳ್ಳದೆ ಲಾಕ್ ಡೌನ್ ಘೋಷಿಸುವ ಮೂಲಕ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕೊರೋನಾ ಸಾವಿನ ಜೊತೆಗೆ ಆಹಾರವಿಲ್ಲದೆ ಸಾವನ್ನಪ್ಪುವ ಪರಿಸ್ಥಿತಿ ಉದ್ಭವಿಸುವ ಭೀತಿಯಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆತಂಕ ವ್ಯಕ್ತಪಡಿಸಿದರು.ಅವರು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಅನನ್ಯ ದಲ್ಲಿ ಮೇ 6ರಂದು ನಡೆದ ಮನೆಮನೆಗಳಲ್ಲಿ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಕೊರೋನಾ 2ನೇ ಅಲೆ ಹರಡುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿದೆ. ಕಳೆದೊಂದು ವರ್ಷಗಳಿಂದ ಚಪ್ಪಾಳೆ, ಘಂಟೆ, ದೀಪ ಹಚ್ಚಿದ್ದು ಬಿಟ್ಟರೆ ಬೇರೇನೂ ಆಗಿರಲಿಲ್ಲ ಎಂದ ಅವರು ಸರಕಾರಗಳ ನಿರ್ಲಕ್ಷ್ಯಕ್ಕೆ ಇಂದು ಸಾಲು ಸಾಲಾಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ; ಇದು ಸರಕಾರಿ ಪ್ರಾಯೋಜಿತ ವ್ಯವಸ್ಥಿತ ಕೊಲೆಯಾಗಿದ್ದು, ಇದರ ಹೊಣೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿದರು. ದೇಶದ ಜನರಿಗೆ ಕನಿಷ್ಠ ಉಚಿತ ಕೋವಿಡ್ ಲಸಿಕೆ ನೀಡಲು ಸಾಧ್ಯವಿಲ್ಲ ಎಂದಾದರೆ ದೇಶದ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದನ್ನು ಯೋಚಿಸಬಹುದು ಎಂದರು. ಆಸ್ಪತ್ರೆಗಳಲ್ಲಿ ಸೂಕ್ತ ಬೆಡ್ ಸಿಗದೆ ರಸ್ತೆ ಬದಿಯಲ್ಲಿ ಜನರು ಸಾಯುತ್ತಿರುವಾಗ, ಆಮ್ಲಜನಕ ಇಲ್ಲದೆ ಸಾವಿರಾರು ಜನರು ಸಾಯುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ಹಾಗೂ ಪ್ರಧಾನಿ ನಿವಾಸ ನಿರ್ಮಾಣದಲ್ಲಿ ಬ್ಯೂಸಿಯಾಗಿದ್ದಾರೆ. ಇಂತಹ ಪ್ರಧಾನಿಯನ್ನು ಇಡೀ ಜಗತ್ತು ಎಂದೂ ಕಂಡಿಲ್ಲ ಎಂದು ಟೀಕಿಸಿದರು.ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ. ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಾಕ್ ಡೌನ್ ಜೊತೆಗೆ ಕೇರಳ ಮಾದರಿಯಂತೆ ಆಹಾರ ಪದಾರ್ಥಗಳನ್ನು ಜನರಿಗೆ ಉಚಿತವಾಗಿ ನೀಡಬೇಕು. ಪ್ರತಿ ಕುಟುಂಬಕ್ಕೆ ಮಾಸಿಕ ತಲಾ 10 ಸಾವಿರ ನೇರ ನಗದು ನೀಡಬೇಕು ಎಂದು ಒತ್ತಾಯಿಸಿದರಲ್ಲದೇ ಲಾಕ್ ಡೌನ್ ಹಾಗೂ ಸೆಮಿಲಾಕ್ ಡೌನ್‌ನಿಂದ ಬಾದಿತ ಎಲ್ಲಾ ಕಾರ್ಮಿಕರಿಗೂ ಪೂರ್ಣ ವೇತನದ ಜೊತೆಗೆ ಮುಂಚೂಣಿ ಕಾರ್ಮಿಕರು, ಕೋವಿಡ್ ವಾರಿಯರ್ಸ್‌ಗಳಿಗೆ ಸುರಕ್ಷಿತ ಕಿಟ್‌ಗಳನ್ನು ನೀಡುವ ಮೂಲಕ ಜನರ ಬದುಕುವ ಹಕ್ಕನ್ನು ಖಾತ್ರಿಗೊಳಿಸಬೇಕು ಎಂದ ಅವರು ಜವಾಬ್ದಾರಿಯುತ ಸರ್ಕಾರ ಬೇಜಾವ್ದಾರಿತನದಿಂದ ವರ್ತಿಸುವುದು ಸರಿಯಲ್ಲ ಎಂದರು. ಪ್ರತಿಭಟನೆಗೂ ಮುನ್ನ ಇಂದು ನಿಧನರಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ವೈಚಾರಿಕ-ಪ್ರಗತಿಪರ ಸಾಹಿತಿ ಹಾಗೂ ಸಿಪಿಐ(ಎಂ) ಸದಸ್ಯ ಡಾ. ಜಿ. ಭಾಸ್ಕರ ಮಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಪ್ರತಿಭಟನೆಯಲ್ಲಿ ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯ ಶೇಖರ್ ಎಲ್ ಸಹಿತ ವಿವಿಧ ಸಾಮೂಹಿಕ ಸಂಘಟನೆಗಳ ಮುಖಂಡರಾದ ಸುಕನ್ಯಾ ಹೆಚ್, ಸುಜೀತ್ ಉಜಿರೆ, ಸುಹಾಸ್ ಬೆಳ್ತಂಗಡಿ, ಜಯನ್ ಮುಂಡಾಜೆ, ಕುಸುಮ ಮಾಚಾರ್, ಭಾರತಿ ಬೆಳ್ತಂಗಡಿ, ಭರತ್ ಬೆಳ್ತಂಗಡಿ, ಪ್ರಗತಿಪರ ಚಿಂತಕ ವೆಂಕಟೇಶ್ ಮಯ್ಯ ಉಪಸ್ಥಿತರಿದ್ದರು.






