ಪೊಲೀಸರ ಕರ್ತವ್ಯಕ್ಕೆ ಜನಪ್ರತಿನಿಧಿಗಳ ತೊಡರುಗಾಲು;ಪೊಲೀಸರ ನೈತಿಕ ಸ್ಥೈರ್ಯ ಕುಸಿತ.

ಪೊಲೀಸರ ಕರ್ತವ್ಯಕ್ಕೆ ಜನಪ್ರತಿನಿಧಿಗಳ ತೊಡರುಗಾಲು;ಪೊಲೀಸರ ನೈತಿಕ ಸ್ಥೈರ್ಯ ಕುಸಿತ.
Facebook
Twitter
LinkedIn
WhatsApp

ಬೆಳ್ತಂಗಡಿ: ಒಂದೆಡೆ ರಾಜ್ಯ ಸರಕಾರ ಲಾಕ್‌ಡೌನ್ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿ, ಕೊರೋನಾ ಚೈನ್‌ಲಿಂಕ್ ತುಂಡರಿಸಲು ಮುಂದಾಗಿದೆ. ಅದಕ್ಕಾಗಿ ಮೇ 10ರಿಂದ ಅಂತರ್‌ಜಿಲ್ಲಾ ಸಂಚಾರಕ್ಕೂ ನಿರ್ಬಂಧ ಹೇರಲು ಮುಂದಾಗಿದೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಂತೂ ಈ ನಿಯಮಗಳು ಮತ್ತಷ್ಟು ಬಿಗಿಯಾಗಲಿದೆ. ಆದರೆ ಬೆಳ್ತಂಗಡಿಯಲ್ಲಿ ವೀಕ್‌ಎಂಡ್ ಕರ್ಫ್ಯೂ ಸಂದರ್ಭ ಮೇ 8ರಂದು ರಾಜ್ಯ ಸರಕಾರದ ಮಾರ್ಗಸೂಚಿಯನ್ವಯ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ಪೊಲೀಸರ ಮೇಲೆ ಪ್ರಭಾವ ಬೀರಿ ಅವರ ನೈತಿಕಸ್ಥೈರ್ಯ ಕುಸಿಯುವಂತೆ ಮಾಡುತ್ತಿರುವ ಜನಪ್ರತಿನಿಧಿಗಳು, ಜಿಲ್ಲೆಯ ಹೊರಗಿನಿಂದ ಕೊರೋನಾ ಹೊತ್ತು ತರುವ ಸಂದೇಹವಿರುವ ವಾಹನಗಳನ್ನು ತಡೆಯದಂತೆ ಮೌಖಿಕ ಸೂಚನೆ ನೀಡಿ ಪೊಲೀಸರ ನೈತಿಕಸ್ಥೈರ್ಯದ ಮೇಲೆ ಸವಾರಿ ಮಾಡುವುದರ ಜೊತೆಗೆ ರಾಜ್ಯದ ತಮ್ಮದೇ ಪಕ್ಷದ ಸರಕಾರವನ್ನೂ ಅವಮಾನಿಸಹೊರಟಿದ್ದಾರೆ.ಮೇ 8ರಂದು ಬೆಳಿಗ್ಗೆ ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಬ್ಯಾರಿಕೇಡ್ ಅಳವಡಿಸಿ, ವಾಹನಗಳ ತಪಾಸಣೆಗೆ ಮುಂದಾದ ಬೆಳ್ತಂಗಡಿ ಪೊಲೀಸರು, ಅನಗತ್ಯ ಓಡಾಡುವ ವಾಹನಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದರು. ಸರಕಾರದ ಸೂಚನೆಯಂತೆ ತುರ್ತು ಸೇವೆ ಹೊರತುಪಡಿಸಿ, ಮಿಕ್ಕೆಲ್ಲಾ ವಾಹನಗಳ ಮೇಲೆ ಪ್ರಕರಣ ದಾಖಲಿಸುತ್ತಿದ್ದರು. ಅಂತೆಯೇ ಇಂತಹ ಕಠಿಣ ಸಂದರ್ಭದಲ್ಲೂ ಬೆಂಗಳೂರು ಸಹಿತ ಹೊರಜಿಲ್ಲೆಗಳಿಂದ ಕಾನೂನುಬಾಹಿರವಾಗಿ ನಿಯಮಗಳಿಗೆ ಸವಾಲಾಗಿ ಬಂದ ವಾಹನಗಳನ್ನು ತಡೆದ ಪೊಲೀಸರು, ಅಂತಹ ವಾಹನಗಳನ್ನು ಪೊಲೀಸ್ ಠಾಣೆಗೆ ಕಳುಹಿಸುತ್ತಿದ್ದರು. ಈ ಮಧ್ಯೆ ಪೊಲೀಸರ ಈ ನ್ಯಾಯ ಸಮ್ಮತ ಹಾಗೂ ಜನಪರ ಕಾಳಜಿಯ ಕರ್ತವ್ಯದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಜನಪ್ರತಿನಿಧಿಗಳು, ಸರಕಾರದ ಮಾರ್ಗಸೂಚಿ ಮೀರಿ ಬಂದ ಹೊರಜಿಲ್ಲೆಯ ವಾಹನಗಳ ವಿರುದ್ಧ ಪ್ರಕರಣ ದಾಖಲಿಸದೇ ಗೌರವಯುತವಾಗಿ ಬಿಟ್ಟುಬಿಡುವಂತೆ ಪೊಲೀಸ್ ಅಧಿಕಾರಿಗಳಿಗೆ ಫೋನ್ ಮೂಲಕ ಸೂಚನೆ ನೀಡಿದರು ಎಂದು ತಿಳಿದುಬಂದಿದೆ. ಪೊಲೀಸ್ ಠಾಣೆಯ ಒಳಗೆ ಹೋಗುವಾಗ ಕಾನೂನು ಉಲ್ಲಂಘಿಸಿದ ಪಾಪಪ್ರಜ್ಞೆಯಿಂದ ತಲೆ ತಗ್ಗಿಸಿ ಹೋದ ಹೊರ ಜಿಲ್ಲೆಯ ಈ ವಾಹನಗಳ ಮಾಲಕರು ಹಾಗೂ ಚಾಲಕರು; ಯಾವಾಗ ಜನಪ್ರತಿನಿಧಿಯ ಪ್ರಭಾವದಿಂದ ತಮಗೆ ಬಿಡುಗಡೆ ಸೊರಕಿತೋ, ಪೊಲೀಸರನ್ನು ಸೋಲಿಸಿದೆವೆಂಬ ದರ್ಪದಿಂದ ಪೊಲೀಸ್ ಠಾಣೆಯಿಂದ ಎದೆಯುಬ್ಬಿಸಿ ಹೊರಬಂದ ರೀತಿ ಮಾತ್ರ ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಊರ ಜನರ ರಕ್ಷಣೆಗೆ ನಿಂತ ಪ್ರಾಮಾಣಿಕ ಪೊಲೀಸರನ್ನು ಅಣಕಿಸುವಂತಿತ್ತು ಎಂಬುವುದು ಪ್ರತ್ಯಕ್ಷದರ್ಶಿಗಳ ಅನಿಸಿಕೆ. ಈ ರೀತಿ ಅನಗತ್ಯವಾಗಿ ಪೊಲೀಸರ ಕೆಲಸದಲ್ಲಿ‌ ಮೂಗು ತೂರಿಸಿ, ಅವರನ್ನು ಅವಮಾನಿಸುವ ಬದಲು ಸರಕಾರದ ಮೇಲೆ ತಮ್ಮ ಪ್ರಭಾವ ಬಳಸುವ ಮೂಲಕ ಜನಪ್ರತಿನಿಧಿಗಳು ಕೊರೋನಾ ಮಾರ್ಗಸೂಚಿಗೇ ತಿದ್ದುಪಡಿ ತಂದು, ಲಾಕ್‌ಡೌನ್ ಸಂದರ್ಭ ಎಲ್ಲ ವಾಹನಗಳೂ ಮನಬಂದಂತೆ ಓಡಾಡಲು ಅವಕಾಶ ಕಲ್ಪಿಸಲಿ, ಆಮೂಲಕ ಕರ್ತವ್ಯನಿಷ್ಠ ಪೊಲೀಸರ ಮಾನ-ಗೌರವ-ಸ್ವಾಭಿಮಾನ ಕಾಪಾಡಲಿ ಎಂಬ ಆಗ್ರಹ ತಾಲೂಕಿನ ಕಾನೂನು ಗೌರವಿಸುವ ಬಹುಸಂಖ್ಯಾಕ ನಾಗರಿಕರದ್ದು.

Latest News

Related Posts