ಬೆಂಗಳೂರಿಂದ ಬಂದವರ ವರಪ್ರಸಾದ..ಬೆಳ್ತಂಗಡಿ ಪಟ್ಟಣದ ಕಲ್ಲಗುಡ್ಡೆ ವಾರ್ಡ್ ಸೀಲ್‌ಡೌನ್

ಬೆಂಗಳೂರಿಂದ ಬಂದವರ ವರಪ್ರಸಾದ..ಬೆಳ್ತಂಗಡಿ ಪಟ್ಟಣದ ಕಲ್ಲಗುಡ್ಡೆ ವಾರ್ಡ್ ಸೀಲ್‌ಡೌನ್
Facebook
Twitter
LinkedIn
WhatsApp

ಬೆಳ್ತಂಗಡಿ: ಜನತಾ ಲಾಕ್‌ಡೌನ್ ಘೋಷಣೆಯಾಗುತ್ತಲೇ ಬೆಂಗಳೂರಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ಬಂದ ಸಾಕಷ್ಟು ಮಂದಿ ತಮ್ಮತಮ್ಮ ಹುಟ್ಟೂರಿಗೆ ತಮಗರಿವಿಲ್ಲದೇ ಕೊರೋನಾ ಸೋಂಕು ಹೊತ್ತು ತಂದ ಪರಿಣಾಮ ಇಂದು ಬೆಳ್ತಂಗಡಿ ತಾಲೂಕಿನಲ್ಲೂ ಕೊರೋನಾ ಅತ್ಯಂತ ವೇಗವಾಗಿ ಹರಡುತ್ತಿದೆ. ತಾಲೂಕಿನ ವಿವಿದೆಡೆ ಸೀಲ್‌ಡೌನ್ ಆಗುತ್ತಿದೆ. ನಿನ್ನೆಯಷ್ಟೇ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಸುದೆಮುಗೇರು ವಾರ್ಡ್ ಸೀಲ್‌ಡೌನ್ ಆಗಿತ್ತು. ಇಂದು ಮೇ 9ರಂದು ಹತ್ತಾರು ಕೊರೋನಾ ಸೋಂಕು ಪತ್ತೆಯಾದ ಕಲ್ಲಗುಡ್ಡೆ ವಾರ್ಡ್ ಸೀಲ್‌ಡೌನ್. ಎಲ್ಲವೂ ಬೆಂಗಳೂರು ಮಹಿಮೆ.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರು ಜನತಾ ಕರ್ಫ್ಯೂ ಸಂದರ್ಭ ಬೆಂಗಳೂರಿನಿಂದ ಹುಟ್ಟೂರಿಗೆ ಬರುವ ಬಂಧುಗಳಿಗಾಗಿ ಊರಿಗೆ ಬಂದ ಕೂಡಲೇ ಕ್ವಾರಂಟೈನ್‌ಗೆ ಒಳಗಾಗಲು ಸ್ಥಳೀಯ ಶಾಲೆಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳಿರುವ ವ್ಯವಸ್ಥೆ ಕಲ್ಪಿಸಿದ್ದರು. ಅಂತೆಯೇ ಬೆಂಗಳೂರಿಂದ ಊರಿಗೆ ಬರುವವರಿಗಾಗಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿ, ನೆರವಾಗಿದ್ದರು. ಆದರೆ ಬೆಂಗಳೂರಿಂದ ಊರಿಗೆ ಬರಲು ಶಾಸಕ ಹರೀಶ್ ಪೂಂಜ ವ್ಯವಸ್ಥೆ ಮಾಡಿದ ಬಸ್ ಸೌಕರ್ಯ ಬಳಸಿ ಆರಾಮವಾಗಿ ಊರಿಗೆ ಬಂದಿಳಿದ ಈ ಮಂದಿ, ಶಾಲೆಯಲ್ಲಿ ಕ್ವಾರಂಟೈನ್ ಆಗಿ ತಮ್ಮ ಮನೆಯವರನ್ನು ಹಾಗೂ ಊರವರನ್ನು ಕೊರೋನಾ ಸೋಂಕಿನಿಂದ ರಕ್ಷಿಸುವ ಬದಲಾಗಿ, ನೇರವಾಗಿ ಮನೆಗೆ ತೆರಳಿದರಲ್ಲದೇ, ಬಹುತೇಕ ಮಂದಿ ಮರುಘಳಿಗೆಯಿಂದಲೇ ಊರೆಲ್ಲಾ ಸುತ್ತಾಡಿದರು. ಪರಿಣಾಮವಾಗಿ ತಾಲೂಕಿನ ಹಳ್ಳಿಹಳ್ಳಿಗಳಿಗೆ-ಗಲ್ಲಿಗಲ್ಲಿಗಳಿಗೆ ಕೊರೋನಾ ಸೋಂಕು ವಕ್ಕರಿಸಿತು. ಊರಿಗೆ ಬರಲು ಶಾಸಕ ಹರೀಶ್ ಪೂಂಜ ವ್ಯವಸ್ಥೆಗೊಳಿಸಿದ ಬಸ್ ಬಳಸಿದ ಈ ಬೆಂಗಳೂರು ಮಂದಿ ಕ್ವಾರಂಟೈನ್ ವಿಚಾರದಲ್ಲಿ ಶಾಸಕ ಹರೀಶ್ ಪೂಂಜರ ವಿನಂತಿಯನ್ನು ಧಿಕ್ಕರಿಸಿ ವಿಕೃತಿ ಮೆರೆದದ್ದರ ಪರಿಣಾಮ ಇಂದು ಬೆಳ್ತಂಗಡಿ ತಾಲೂಕು ಕೊರೋನಾ ಹಾಟ್‌ಸ್ಪಾಟ್ ಆಗುವಂತಾಗಿದೆ.ಕೊರೋನಾ ಸೋಂಕು ನಿಯಂತ್ರಿಸಲು ಇನ್ನು ಇರುವುದು ಒಂದೇ ದಾರಿ. ಮೊದಲಿಗೆ ಕೊರೋನ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಸೀಲ್‌ಡೌನ್ ಮಾಡಿ ಆ ಏರಿಯಾದ ನಿವಾಸಿಗರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು; ಸರಕಾರದ ಕೋವಿಡ್ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವುದು; ಕೊರೋನಾ ನಿಯಂತ್ರಣ ವಿಚಾರದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಅನುಷ್ಠಾನಿಸುವ ಪೊಲೀಸ್ ಸಹಿತ ಇತರ ಸರಕಾರಿ ಇಲಾಖೆಯ ಅಧಿಕಾರಿಗಳ ಕೆಲಸದಲ್ಲಿ ಶಾಸಕರ ಸಹಿತ ಯಾವುದೇ ಜನಪ್ರತಿನಿಧಿ ಮೂಗ ತೂರಿಸಿ ತನ್ನ ಪ್ರಭಾವ ಬೀರಿ ಕರ್ತವ್ಯದ ಹಾದಿ ತಪ್ಪಿಸದಿರುವುದು. ಇಲ್ಲವಾದಲ್ಲಿ ಕೊರೋನಾ ಸೋಂಕು ಬೆಳ್ತಂಗಡಿ ತಾಲೂಕಿನಲ್ಲಿ ಅನಾಹುತ ಸೃಷ್ಠಿಸುವುದು ಗ್ಯಾರಂಟಿ.

Latest News

Related Posts