ಮೂಡುಬಿದಿರೆ: ವೀಕೆಂಡ್ ಲಾಕ್ಡೌನ್ ಇದ್ದರೂ ಮೇ 8ರ ಶನಿವಾರವೇನೋ ಬಹಳಷ್ಟು ಮಂದಿ ತಮ್ಮ ಬೇಕು-ಬೇಡಗಳನ್ನು ಪೂರೈಸಿಕೊಳ್ಳಲು ತಮ್ಮ ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳಲ್ಲಿ ಪೇಟೆ ಸವಾರಿ ನಡೆಸಿದ್ದರು. ಆದರೆ ಇಂದು ಮೇ 9ರ ಭಾನುವಾರ ಮುಂಜಾನೆಯೇ ಫೀಲ್ಡಿಗಿಳಿದ ಮೂಡುಬಿದಿರೆ ಪೊಲೀಸರು ಹೆಚ್ಚು ಕಡೆ ವಾಹನ ಸಂಚರಿಸುವ ಭಾಗಗಳನ್ನು ಗುರುತಿಸಿಕೊಂಡು, ಮೂರು ಕಡೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿಕೊಂಡು ಅನಗತ್ಯ ಸಂಚಾರ ನಡೆಸುವವರನ್ನು ತಡೆದು 50ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಮೇ 9ರ ಭಾನುವಾರ ಮುಂಜಾನೆಯೇ ಮಂಗಳೂರಿನಿಂದ ಪೊಲೀಸ್ ಗಸ್ತು ವಾಹನವೊಂದು ಮೂಡುಬಿದಿರೆಗೆ ಬಂದು ಪೇಟೆಯಲ್ಲಿ ಪರಿಶೀಲನೆ ನಡೆಸಿದೆ. ಹೋಟೇಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶವಿದ್ದ ಕಾರಣ ಒಟ್ಟು 4 ಹೋಟೆಲ್ಗಳು ತೆರೆದು ಪಾರ್ಸೆಲ್ ವ್ಯವಹಾರ ಪ್ರಾರಂಭಿಸಿದ್ದವು. ಹಾಲಿನ ಮತ್ತು ದಿನಪತ್ರಿಕೆ ಮಾರಾಟದ ಅಂಗಡಿಗಳೂ ತೆರೆದಿದ್ದವು. ಇಲ್ಲಿನ ಪ್ರಮುಖ ಪತ್ರಿಕಾ ವಿತರಣೆ ಮತ್ತು ಹಾಲು ಮಾರಾಟದ ಅಂಗಡಿಯೊಂದರಲ್ಲಿ ಬೇಕರಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದುದನ್ನು ಗಮನಿಸಿ ಹಾಲು ಮತ್ತು ಪೇಪರ್ ಮಾತ್ರ ವ್ಯವಹಾರ ನಡೆಸುವಂತೆ ತಾಕೀತು ಮಾಡಲಾಯಿತು. ಇದಾದ ಸ್ವಲ್ಪ ಹೊತ್ತಿಗೆ ಮೂಡುಬಿದಿರೆ ಪೊಲೀಸರು ರೋಟರಿ ಶಾಲೆ, ವಿದ್ಯಾಗಿರಿ ಮತ್ತು ಬೆಳುವಾಯಿಯ ಕಾಂತಾವರ ಕ್ರಾಸ್ನಲ್ಲಿ ಬ್ಯಾರಿಕೇಡ್ಗಳನ್ನು ಹಾಕಿಕೊಂಡು ತಪಾಸಣೆ ಪ್ರಾರಂಭಿಸಿದರು. ದ್ವಿಚಕ್ರ, ತ್ರಿಚಕ್ರ, ಕಾರು ಮತ್ತು ಟೆಂಪೋಗಳ ಓಡಾಟವನ್ನು ತಡೆಹಿಡಿದು ಪರಿಶೀಲನೆ ನಡೆಸಿ ತೀರಾ ಅಗತ್ಯವಿರುವವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕೊಟ್ಟು ಉಳಿದ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾತ್ರೆ ಮದ್ದಿನ ನೆಪದಲ್ಲಿ ಬಂದವರಿಗೆ ಇಲ್ಲೇ ವಾಹನ ಬಿಟ್ಟು ನಡೆದು ಹೋಗಿ ಮಾತ್ರೆ ಖರೀದಿಸಿ ಬಂದು ಚೀಟಿ ತೋರಿಸಿ ನಿಮ್ಮ ವಾಹನ ಒಯ್ಯಿರಿ ಎಂದೂ ಪೊಲೀಸರು ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ. ಮನೆಯಲ್ಲಿ ತಯಾರಿಸಿದ ಆಹಾರವನ್ನು ಇತರರಿಗೆ ನೀಡಲು ದ್ವಿಚಕ್ರ ವಾಹನದಲ್ಲಿ ಹೊರಟಿದ್ದವರನ್ನೂ ತಡೆದು ನಡೆದೇ ಹೋಗಿ ಆಹಾರ ಕೊಟ್ಟು ಬರುವಂತೆ ತಾಕೀತು ಮಾಡಲಾಗಿದೆ. ಪೂರ್ವಾಹ್ನ 8ರ ಸುಮಾರಿಗೆ ಸ್ವತಃ ಫೀಲ್ಡಿಗಿಳಿದ ಇಲ್ಲಿನ ಠಾಣಾಧಿಕಾರಿ ದಿನೇಶ್ ಕುಮಾರ್ ಅವರು ಮೂಡುಬಿದಿರೆ ತಾಲೂಕಿನಾದ್ಯಂತ ಸಂಚರಿಸಿ ಮೈಕ್ನ ಮೂಲಕ ಅನಗತ್ಯ ತಿರುಗಾಟ ನಡೆಸುವವರನ್ನು ಎಚ್ಚರಿಸುವ ಕಾರ್ಯ ನಡೆಸಿದ್ದಾರೆ. ಭಾನುವಾರದ್ದು ಸ್ಯಾಂಪಲ್ ಮಾತ್ರ. ಮೇ 10ರಿಂದ ಇನ್ನಷ್ಟು ಟಫ್ ರೂಲ್ಸ್ ಜಾರಿಗೆ ಬರುವ ಕಾರಣ ಪೊಲೀಸರ ಎಚ್ಚರಿಕೆಯ ನಂತರವೂ ಅನಗತ್ಯ ಓಡಾಟ ನಡೆಸಿದರೆ ಪೊಲೀಸರ ಬೆತ್ತದ ರುಚಿ ಸವಿಯಲೂ ಸಿದ್ಧರಿರಬೇಕಾದ ಸಾಧ್ಯತೆ ಬಲವಾಗಿದೆ.ಒಟ್ಟು 8 ಕಡೆಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿ ತಪಾಸಣೆ ನಡೆಸುವ ಅಗತ್ಯವಿದ್ದರೂ ಸಿಬ್ಬಂದಿಗಳ ಕೊರತೆಯಿರುವ ಕಾರಣ ಮೂರೇ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.






