ಬೆಳ್ತಂಗಡಿ: ಸರಕಾರ ಹೊರಡಿಸಿದ ಕೊರೋನಾ ಸೋಂಕು ನಿಯಂತ್ರಣ ಮಾರ್ಗಸೂಚಿಗಳ ಅನುಷ್ಠಾನದ ಜವಾಬ್ದಾರಿ ಬೆಳ್ತಂಗಡಿ ತಾಲೂಕಿನಲ್ಲಿ ಪೊಲೀಸರಿಗಷ್ಟೇನಾ…. ತಾಲೂಕು ಆಡಳಿತ ಈ ವಿಚಾರದಲ್ಲಿ ಸಂಪೂರ್ಣ ನಿಷ್ಕ್ರೀಯವಾಗಿದ್ದರೂ ನಮ್ಮ ಶಾಸಕ ಹರೀಶ್ ಪೂಂಜ ಯಾಕೆ ಸುಮ್ಮನಿದ್ದಾರೆ? ರಾಜ್ಯದಲ್ಲೇ ಕೋವಿಡ್ ನಿಯಂತ್ರಣ ನಿಯಮ ಪಾಲನೆಗೆ ಕಾನೂನು ವಿರೋಧಿಗಳು ಸವಾಲು ಹಾಕುವ ಊರುಗಳಲ್ಲಿ ಬೆಳ್ತಂಗಡಿ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದರೂ ತಪ್ಪಾಗದು. ಇದಕ್ಕೆ ನೇರ ಹೊಣೆ ತಾಲೂಕು ಆಡಳಿತ. ಒಂದೊಮ್ಮೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳ್ತಂಗಡಿಯಲ್ಲಿ ಈ ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿಯೇ ತಹಶೀಲ್ದಾರರಾಗಿ ಇರುತ್ತಿದ್ದರೆ ಬೆಳ್ತಂಗಡಿ ಇಂದು ಕೊರೋನಾ ಹಾಟ್‌ಸ್ಪಾಟ್ ಆಗುತ್ತಿರಲಿಲ್ಲ ಎಂದು ತಾಲೂಕಿನ ಕಾನೂನು ಪಾಲಿಸಿ ಸರಕಾರವನ್ನು ಗೌರವಿಸುವ 90% ನಾಗರಿಕರು ಅಭಿಪ್ರಾಯಿಸುತ್ತಿದ್ದಾರೆ.ಅಲ್ಲಾ, ರಾಜ್ಯ ಸರಕಾರ ಮೇ 10ರಿಂದ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಘೋಷಿಸಿದೆ. ಮುಖ್ಯವಾಗಿ ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದೆ. ಅಗತ್ಯ ವಸ್ತು ಹೊರತುಪಡಿಸಿ ಇತರ ಅಂಗಡಿ ತೆರೆಯದಂತೆ ನಿರ್ಬಂಧ ಹೇರಿದೆ. ಅಗತ್ಯ ವಸ್ತು ಖರೀದಿಗೂ ಸಮಯ ನಿಗದಿ ಪಡಿಸಿದೆ. ಈ ಎಲ್ಲ ವಿಚಾರಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಿ ಜಾಗೃತಿಗೊಳಿಸುವುದು ತಾಲೂಕು ಆಡಳಿತದ ಜವಾಬ್ದಾರಿಯಾಗಿತ್ತು. ತಾಲೂಕು ಕೇಂದ್ರ ಮಾತ್ರವಲ್ಲ, ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲೂ ಧ್ವನಿವರ್ದಕದ ಮೂಲಕ ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಪಡಿಸಬೇಕಾಗಿತ್ತು. ಕೊರೋನಾ ಜಾಗೃತಿಗೆ ಮತ್ತು ತುರ್ತು ಅಗತ್ಯಕ್ಕಾಗಿ ಸರಕಾರ ನೀಡಿದ ಅನುದಾನ 60ಲಕ್ಷ ರೂಪಾಯಿ ತಾಲೂಕು ಆಡಳಿತದಲ್ಲಿ ಕೊಳೆಯುತ್ತಾ ಬಿದ್ದಿದೆ. ಈ ಅನುದಾನದ ಸದ್ಬಳಕೆ ಯಾವಾಗ ಎಂಬುದಕ್ಕೆ ತಹಶೀಲ್ದಾರ್ ಮಹೇಶ್ ಜೆ. ತಾಲೂಕಿನ ನಾಗರಿಕರಿಗೆ ಉತ್ತರಿಸಬೇಕು.ಲಾಕ್‌ಡೌನ್‌ನ ಮೊದಲ ದಿನವಾದ ಮೇ10ರಂದು ಬೆಳಿಗ್ಗೆ 7ಗಂಟೆಗೆಲ್ಲಾ ಬೆಳ್ತಂಗಡಿ ಪೇಟೆಯಲ್ಲಿ ಹಿಂದೆಂದೂ ಕಂಡುಕೇಳರಿಯದಷ್ಟು ವಾಹನ ದಟ್ಟಣೆಯಿತ್ತು. ಬೇಕರಿ ಸಹಿತ ಎಲ್ಲ ಅಂಗಡಿಗಳೂ ತೆರೆದಿತ್ತು. ಮಾಸ್ಕ್, ವೈಯಕ್ತಿಕ ಅಂತರ ಏನೆಂದೇ ಅರಿಯದು ಎನ್ನುವಂತೆ ಜನ ಅಂಗಡಿಗಳ ಮುಂದೆ ನೆರೆದಿದ್ದರು. ಈ ಜನಗಳಲ್ಲಿ ಬೆಳ್ತಂಗಡಿ ಗ್ರಾಮ ವ್ಯಾಪ್ತಿಯ ನಿವಾಸಿಗರು 10%ವೂ ಇರಲಿಲ್ಲ. ಎಲ್ಲ ಪಕ್ಕದ ಗ್ರಾಮದವರು ಮಾತ್ರವಲ್ಲ; ತಾಲೂಕಿನ ಮೂಲೆ ಮೂಲೆಯವರು. ಇವರಿಗೆಲ್ಲಾ ದಿನಬಳಕೆ ವಸ್ತು ಖರೀದಿ ನೆಪದಲ್ಲಿ ತಮ್ಮ ಗ್ರಾಮಗಳಿಂದ ಹೊರಗೆ ಬರಲು ಬಿಟ್ಟದ್ದು ಗ್ರಾಮ ಪಂಚಾಯತ್‌ಗಳ ಆ ಮೂಲಕ ತಾಲೂಕು ಆಡಳಿತದ ವೈಫಲ್ಯವೇ. ಸರಕಾರದ ಮಾರ್ಗಸೂಚಿ ಪಾಲನೆಗಾಗಿ ಗ್ರಾಮ ಪಂಚಾಯತ್ ಸಹಿತ ಎಲ್ಲ ಸರಕಾರಿ ಇಲಾಖೆಗಳನ್ನು ಬಳಸಿಕೊಳ್ಳಬೇಕಾದ್ದು ತಾಲೂಕು ಆಡಳಿತದ ಜವಾಬ್ದಾರಿ. ಇದನ್ನು ಮರೆತ ಬೆಳ್ತಂಗಡಿ ತಾಲೂಕು ಆಡಳಿತ ಎಲ್ಲ ಜವಾಬ್ದಾರಿಗಳನ್ನು ಪೊಲೀಸ್ ಇಲಾಖೆಯ ಮೇಲೆ ಹಾಕಿ ಸುಮ್ಮನಾದರೆ… ಬೆಳ್ತಂಗಡಿ ತಾಲೂಕಲ್ಲಿ ಕೊರೋನಾ ಸುನಾಮಿ ಏಳುವ ಅಪಾಯವಿದೆ.ಮೇ 10ರ ಬೆಳಿಗ್ಗೆ ಬೆಳ್ತಂಗಡಿ ಸಂತೆಕಟ್ಟೆ ಬಳಿ ಬ್ಯಾರಿಕೇಡ್ ನಿರ್ಮಿಸಿ, ವಾಹನ ತಪಾಸಣೆಗೆ ನಿಂತ ಪೊಲೀಸರಿಗೆ ವಾಹನಗಳ ಹಿಂಡನ್ನು ನಿಭಾಯಿಸುವುದೇ ಸಮಸ್ಯೆಯಾಗಿ ಹೋಗಿತ್ತು. ಮಾಸ್ಕ್ ಧರಿಸದವರ ಹಾಗೂ ವೈಯಕ್ತಿಕ ಅಂತರ ಮರೆತವರ ಕಡೆಗೆ ಗಮನ ಹರಿಸಲೂ ಸಾಧ್ಯವಿಲ್ಲದ ಅಸಹಾಯಕ ಸ್ಥಿತಿ ಪೊಲೀಸರದ್ದಾಗಿತ್ತು. ಕಾನೂನು ಮೀರಿ ರಸ್ತೆಗಿಳಿದ ನೂರಾರು ವಾಹನಗಳ ಸಾಲನ್ನು ನಿಭಾಯಿಸಲು ಶಕ್ತಿಮೀರಿ ಯತ್ನಿಸಿದ ಪೊಲೀಸರು ಬಳಿಕ ಸುಸ್ತಾಗಿ ಪಕ್ಕಕ್ಕೆ ನಿಂತ ದೃಶ್ಯ ‘ಕಾನೂನು ಸೋತ’ ನೋವನ್ನು ಅಲ್ಲಿದ್ದ ಬೆರಳೆಣಿಕೆಯ ಕಾನೂನುಪಾಲಕರ ಮನದಲ್ಲಿ ತರಿಸಿತ್ತು. *ಬೆಳ್ತಂಗಡಿ ಪೊಲೀಸರು ಸರಕಾರದ ಕೊರೋನಾ ನಿಯಂತ್ರಣ ನಿಯಮ ಅನುಷ್ಠಾನಿಸಲು ಸೌಮ್ಯವಾಗಿ ನೆಟ್ ಪ್ರ್ಯಾಕ್ಟೀಸ್ ಮಾಡಿದ್ದು ಸಾಕು; ಇನ್ನಾದರೂ ಬ್ಯಾಟಿಂಗ್ ಮಾಡಿ ಶತಕ ಬಾರಿಸಲಿ. ಇವರ ಶತಕಗಳ ಮುಂದೆ ಸೋತು ಹೈರಾಣಾಗಿ ಕಾನೂನು ಉಲ್ಲಂಘಿಸುವವರೂ ಕಾನೂನು ಪಾಲಿಸುವಂತಾಗಲಿ. ಆ ಮೂಲಕ ಕೊರೋನಾ ತಾಲೂಕು ಬಿಟ್ಟು ತೊಲಗುವಂತಾಗಲಿ* ಎಂಬ ಸದಾಶಯ ಬೆಳ್ತಂಗಡಿಯ ಕಾನೂನುಪಾಲಿಸುವ ನಾಗರಿಕರದ್ದು.






