ಬೆಳ್ತಂಗಡಿ: ಈ ಹಿಂದೆ 13ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ಕಾಲನಿಯನ್ನು ಸರಕಾರದ ಮಾರ್ಗಸೂಚಿಯಂತೆ ಮೇ 9ರ ಸಂಜೆ ಸೀಲ್‌ಡೌನ್ ಮಾಡಿದ ತಾಲೂಕು ಆಡಳಿತ ಬಳಿಕ ಈ ವಾರ್ಡ್‌ನ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಹಾಕಿದ ಅದಕ್ಕಿಂತಲೂ ಹಾಕಿಸಿದ ರಾಜಕೀಯ ಒತ್ತಡಕ್ಕೆ ಸಿಲುಕಿ ಮೇ 10ರಂದೇ ಸೀಲ್‌ಡೌನನ್ನು ತೆರವುಗೊಳಿಸಿದ ಕ್ರಮ ಪರಿಸರದ ಕಾನೂನುಪಾಲಕ ನಾಗರಿಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಸುದೆಮುಗೇರು ಕಾಲನಿಯಲ್ಲಿ ಇಂದು ಅಂದರೆ ಮೇ 12ರಂದು ಮತ್ತೆ ಹೊಸದಾಗಿ 12 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು; ತಾಲೂಕು ಆಡಳಿತ ರಾಜಕೀಯ ಒತ್ತಡದಿಂದ ಹೊರಬಂದು ಸುದೆಮುಗೇರು ಕಾಲನಿಯ ನಿವಾಸಿಗರಿಗೆ ಆಹಾರ, ಅಗತ್ಯ ಔಷಧಿ ಸಹಿತ ಎಲ್ಲ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ, ಈ ಕಾಲನಿಯನ್ನು ಕನಿಷ್ಠ 14ದಿನಗಳ ಕಾಲ ಸೀಲ್‌ಡೌನ್ ಮಾಡದಿದ್ದರೆ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಕೊರೋನಾ ಸುನಾಮಿ ಏಳುವ ಭೀತಿ ಇದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ಕೊರೋನಾ ಹಾಟ್‌ಸ್ಪಾಟ್ ಆಗುವ ಎಲ್ಲ ಸಾಧ್ಯತೆ ಇದೆ.ಸುದೆಮುಗೇರು ವಾರ್ಡ್‌ನ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ತನ್ನ ಸ್ವಪ್ರತಿಷ್ಠೆಯನ್ನು ಬದಿಗಿರಿಸಿ, ಇದೀಗ ತನ್ನ ವಾರ್ಡ್ನ ಅಮಾಯಕ ಮತದಾರರ ಆರೋಗ್ಯ ಹಾಗೂ ಜೀವ ಉಳಿಸಲು ಸಂಕಲ್ಪಿಸಬೇಕಾಗಿದೆ. ಸರಕಾರ ಮಾಡಿದ ಸೀಲ್‌ಡೌನ್ ತೆಗೆಸೋದು ಸಾಧನೆಯಲ್ಲ; ಕೊರೋನಾ ಸೋಂಕಿನಿಂದ ಅಮಾಯಕ ಬಡಜನರ ಪ್ರಾಣ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಹಾಗೂ ಸೋಂಕು ಹರಡದಂತೆ ತಡೆಯುವುದೇ ನಿಜವಾದ ಸಾಧನೆ ಎಂಬ ನಿತ್ಯಸತ್ಯವನ್ನು ಈ ಭಾಗದ ಪಟ್ಟಣ ಪಂಚಾಯತ್ ಸದಸ್ಯ ಮಾತ್ರವಲ್ಲ; ಮೇ 10ರಂದು ತನ್ನ ಹಿಂಬಾಲಕರ ತಪ್ಪು ಮಾಹಿತಿಯನ್ನೇ ಸತ್ಯವೆಂದು ಭ್ರಮಿಸಿ, ಇಲ್ಲಿನ ಲಾಕ್‌ಡೌನ್ ತೆರವಿಗೆ ಅಧಿಕಾರಿಗಳಿಗೆ ಒತ್ತಡ ಹಾಕುವ ಮೂಲಕ ಲಾಕ್‌ಡೌನ್ ತೆರವುಗೊಳಿಸಿ ಇಲ್ಲಿನ ಅಮಾಯಕರ ಬದುಕನ್ನು ಕೊರೋನಾತಂಕಕ್ಕೆ ತಳ್ಳಿದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅರಿತು, ತಾಲೂಕು ಆಡಳಿತಕ್ಕೆ ಈ ಪ್ರದೇಶವನ್ನು ಸೀಲ್‌ಡೌನ್ ಮಾಡಲು ಸಹಕರಿಸಬೇಕು. ಜೀವ ಉಳಿದರೆ ಮಾತ್ರ ಜೀವನ ಎಂಬ ನಿತ್ಯಸತ್ಯವನ್ನು ಸುದೆಮುಗೇರು ದಲಿತ ಕಾಲನಿಯ ಅಮಾಯಕರಿಗೆ ಮನವರಿಕೆ ಮಾಡಬೇಕಾಗಿದ ಗುರುತರ ಜವಾಬ್ದಾರಿಯನ್ನು ತಾಲೂಕು ಆಡಳಿತದೊಂದಿಗೆ ಸುದೆಮುಗೇರು ವಾರ್ಡ್‌ನ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಹೊರಬೇಕಾಗಿದೆ. ಆ ಮೂಲಕ ಈಗಾಗಲೇ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿರುವ ಸುದೆಮುಗೇರು ವಾರ್ಡ್‌ನಿಂದ ಕೊರೋನಾ ಸುನಾಮಿ ಇಡೀ ಪಟ್ಟಣ ಪಂಚಾಯತ್ ವ್ಯಾಪಿಸದಂತೆ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ. ಸುದೆಮುಗೇರು ಕಾಲನಿಯ ಮಾತ್ರವಲ್ಲ; ತಾಲೂಕಿನ ಜನತೆಯ ಜೀವ ಹಾಗೂ ಜೀವನ ರಕ್ಷಣೆಯ ದೃಷ್ಟಿಯಿಂದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಈ ವಿಚಾರದಲ್ಲಿ ತಾಲೂಕಿನ ಆಡಳಿತದ ಜೊತೆ ಸಹಕಾರ ಮನೋಭಾವ ತೋರಿಯಾರು ಎಂಬ ವಿಶ್ವಾಸ ತಾಲೂಕಿನ ಅವರ ಸಹಸ್ರಾರು ಅಭಿಮಾನಿಗಳದ್ದು.






