ಬೆಳ್ತಂಗಡಿ ಪ. ಪಂ.ನ ಕಲ್ಲಗುಡ್ಡೆಯಲ್ಲಿ 16, ಸುದೆಮುಗೇರಿನಲ್ಲಿ 6 ಹೊಸ ಪಾಸಿಟಿವ್
ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಸುದೆಮುಗೇರು ವಾರ್ಡ್‌ನಲ್ಲಿ ಮೇ 12ರವರೆಗೆ 25 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಇದೀಗ ಇಂದು ಹೊಸ 6ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಇಲ್ಲಿ ಮೇ 9ರಂದು 13ಪ್ರಕರಣ ಪತ್ತೆಯಾದಗಲೇ ಸುದೆಮುಗೇರು ಕಾಲನಿಯನ್ನು ಸೀಲ್‌ಡೌನ್ ಮಾಡಿ ಸೋಂಕು ಹರಡುವಿಕೆ ತಡೆಯಲು ಮುಂದಾದ ಬೆಳ್ತಂಗಡಿಯ ಸ್ಥಳೀಯ ಕಿರಿಯ ಆರೋಗ್ಯ ಪರಿವೀಕ್ಷಕ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ವಸಂತ ಬಂಗೇರ, ತಾಲೂಕು ಆಡಳಿತಕ್ಕೆ ಒತ್ತಡ ಹೇರಿ ಒಂದೇ ದಿನದಲ್ಲಿ ಸೀಲ್‌ಡೌನ್ ತೆರವುಗೊಳಿಸಿದ್ದರು. ಪರಿಣಾಮ ಇದೀಗ ಸುದೆಮುಗೇರು ಕಾಲನಿಯಲ್ಲಿ ಹೊಸ 18ಪ್ರಕರಣ ಪತ್ತೆಯಾಗಿ ಇಡೀ ನಗರದ ನಾಗರಿಕರು ಭಯದಲ್ಲಿ ಬದುಕುವಂತಾಗಿದೆ. ಸುದೆಮುಗೇರು ಕಾಲನಿಯ ಸೀಲ್‌ಡೌನ್ ವಿಚಾರದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಂದರ್ಭ ಮಾಜಿ ಶಾಸಕ ವಸಂತ ಬಂಗೇರ, ಸೋಂಕು ಕಾಣಿಸಿಕೊಂಡ ಕಲ್ಲಗುಡ್ಡೆ ಪ್ರದೇಶವನ್ನು ಸೀಲ್‌ಡೌನ್ ಮಾಡದ ತಾಲೂಕು ಆಡಳಿತದ ಮಲತಾಯಿ ಧೋರಣೆಯನ್ನು ಪ್ರಶ್ನಿಸಿದ್ದರು. ಪಟ್ಟಣ ಪಂಚಾಯತ್‌ನ ಸುದೆಮುಗೇರು ಕಾಂಗ್ರೆಸ್ ವಾರ್ಡ್‌ನಲ್ಲಿ ಇಡೀ ಕಾಲನಿ ಸೀಲ್‌ಡೌನ್ ಮಾಡ್ತೀರಿ; ಕಲ್ಲಗುಡ್ಡೆ ಬಿಜೆಪಿ ವಾರ್ಡ್‌ನಲ್ಲಿ ಕೊರೋನಾ ಸೋಂಕಿತರ ಮನೆ ಮಾತ್ರ ಸೀಲ್‌ಡೌನ್ ಮಾಡ್ತೀರಿ; ಕೊರೋನಾ ಸೋಂಕಿಗೆ ಬಿಜೆಪಿ ಯಾರು….ಕಾಂಗ್ರೇಸ್ ಯಾರೂಂತ ಗೊತ್ತಾ….. ಎಂದು ತಾಲೂಕು ಆಡಳಿತವನ್ನು ಛೇಡಿಸಿದ್ದರು.ಇದೀಗ ಇಂದು ಮೇ 13ರಂದು ಕಲ್ಲಗುಡ್ಡೆ ವಾರ್ಡ್‌ನಲ್ಲೂ 16ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇಲ್ಲಿ ಸೋಂಕು ಈ ಮಟ್ಟದಲ್ಲಿ ಹರಡಲು ತಾಲೂಕು ಆಡಳಿತವೇ ನೇರ ಹೊಣೆ. ಕೊರೋನಾ ಸೋಂಕಿಗೆ ಕಾಂಗ್ರೇಸ್ ಅಥವಾ ಬಿಜೆಪಿ ಎಂಬ ಭೇದವಿಲ್ಲ ಎಂಬುದೀಗ ಸಾಬೀತಾಗಿದೆ! ತಾಲೂಕು ಆಡಳಿತದ ಹೊಲಸು ರಾಜಕೀಯಕ್ಕೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಕೊರೋನಾ ಹಾಟ್‌ಸ್ಪಾಟ್ ಆಗುತ್ತಿದೆ. ಇಲ್ಲಿನ 90%ಕ್ಕಿಂತಲೂ ಅಧಿಕ ಕಾನೂನು ಪಾಲಕ ನಾಗರಿಕರು ತಾಲೂಕಿನ ಅಧಿಕಾರಿಗಳ ಕರ್ಮಕಾಂಡದಿಂದ ಭಯದಲ್ಲಿ ಬದುಕುವಂತಾಗಿದೆ.ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಮಹೇಶ್ ಜೆ. ಹಾಗೂ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು ಇವರುಗಳಿಗೆ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ತಮ್ಮ ಸರಕಾರಿ ಹುದ್ದೆಗಳಿಗೆ ರಾಜೀನಾಮೆ ನೀಡಿ ನೇರ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿ. ಸರಕಾರಿ ಹುದ್ದೆಯಲ್ಲಿದ್ದು ಕೊರೋನಾ ಮುಂಜಾಗ್ರತಾ ಕ್ರಮಗಳಲ್ಲೂ ರಾಜಕೀಯ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ನಮ್ಮ ತಾಲೂಕನ್ನು ಕೊರೋನಾ ಹಾಟ್‌ಸ್ಪಾಟ್ ಮಾಡುವುದು ಬೇಡ. ಈ ಇಬ್ಬರು ಅಧಿಕಾರಿಗಳಿಗೆ ನಿಜವಾಗಿ ಸರಕಾರದ ಮಾರ್ಗಸೂಚಿ ಅನುಷ್ಠಾನಿಸುವ ಇಚ್ಛಾಶಕ್ತಿ ಇದ್ದರೆ; ತಾವು ಪಡೆಯುವ ಸರಕಾರದ ಸಂಬಳಕ್ಕೆ ಕಿಂಚಿತ್ತಾದರೂ ನ್ಯಾಯ ಸಲ್ಲಿಸಬೇಕೆಂಬ ಆತ್ಮಾಭಿಮಾನವಿದ್ದರೆ; ತಕ್ಷಣ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಸುದೆಮುಗೇರು ಮತ್ತು ಕಲ್ಲಗುಡ್ಡೆ ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಲಿ. ಅಲ್ಲಿನ ಕೊರೋನಾ ಸೋಂಕಿತರ ಮನವೊಲಿಸಿ ಅವರೆಲ್ಲರಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಒದಗಿಸಲಿ. ಇದರೊಂದಿಗೆ ಕೂಲಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿರುವ ಸುದೆಮುಗೇರು ಕಾಲನಿ ಮತ್ತು ಕಲ್ಲಗುಡ್ಡೆ ವಾರ್ಡ್‌ನ ಎಲ್ಲ ಮನೆಗಳಿಗೆ ಹದಿನೈದು ದಿನಗಳಿಗಾಗುವಷ್ಟು ಎಲ್ಲ ದಿನಬಳಕೆಯ ವಸ್ತುಗಳನ್ನು (ಅಕ್ಕಿ, ಬೇಳೆ, ಉಪ್ಪು, ಮೆಣಸು, ಹುಳಿ, ಚಾಹುಡಿ, ಸಕ್ಕರೆ, ಕಾಫಿಹುಡಿ, ಹಾಲಿನಹುಡಿ, ತರಕಾರಿ) ಸರಕಾರದ ದುಡ್ಡಿನಲ್ಲಿಯೇ ಒದಗಿಸಲು ಕ್ರಮಕೈಗೊಳ್ಳಲಿ. ಕೊರೋನಾ ತಡೆಯುವ ನೆಪದಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ಸಾಮಾನ್ಯ ಜ್ಞಾನ ಈ ಇಬ್ಬರೂ ಅಧಿಕಾರಿಗಳಲ್ಲಿರಬೇಕು. ಸರಕಾರ ಕೊರೋನಾ ಸೋಂಕು ತಡೆಗೆ ಮತ್ತು ಸೋಂಕಿತರ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕಿಗೂ 2ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅನುದಾನ ಕಾಯ್ದಿರಿಸಿದ್ದು; ಈಗಾಗಲೇ 60ಲಕ್ಷ ರೂಪಾಯಿಯಷ್ಟು ಹಣ ಬೆಳ್ತಂಗಡಿ ತಹಶೀಲ್ದಾರರ ಖಾತೆಯಲ್ಲಿದೆ. ಇದು ಕೊರೋನಾ ಸೋಂಕಿತರ ಪಾಲಿಗೆ ಹಾಗೂ ಪ್ರಥಮ ಸಂಪರ್ಕಿತರ ಪಾಲಿಗೆ ಕನ್ನಡಿಯೊಳಗಿನ ಗಂಟಾಗದಿರಲಿ.






