ಬೆಳ್ತಂಗಡಿ: ಮೇ 21ರಂದು ಬೆಳ್ತಂಗಡಿ ತಾಲೂಕಿನ ನೆರಿಯಾದಲ್ಲಿ ಬೆಳ್ತಂಗಡಿಯ ರೋಟರಿ ಕ್ಲಬ್ ಹಾಗೂ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ವತಿಯಿಂದ ನೆರಿಯ ಗ್ರಾಮ ಪಂಚಾಯತ್ಗೆ ಕೋವಿಡ್ ನಿರ್ವಹಣೆಗಾಗಿ ‘ಆಪ್ತರಕ್ಷಕ’ ವಾಹನದ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇದೇ ಕಾರ್ಯಕ್ರಮದಲ್ಲಿ ಶಾಸಕರಾಗಿ ಮೂರು ವರ್ಷ ಪೂರೈಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರನ್ನು ಸಮ್ಮಾನಿಸುವ ಮೂಲಕ ಬಕೆಟ್ ಹಿಡಿಯುವ ಕಾರ್ಯಕ್ರಮವೂ ನಡೆಯಿತು.ತಾಲೂಕಿನ ಮಾತ್ರವಲ್ಲ; ಇಡೀ ದೇಶದ ಜನತೆ ಕೊರೋನಾ ಸೋಂಕಿನಿಂದ ತತ್ತರಿಸಿ ಭಯದಿಂದ ಬದುಕುತ್ತಿರುವಾಗ; ತಾಲೂಕಿನಲ್ಲೂ ಕೊರೋನಾಗೆ ಬಲಿಯಾದ ಅದೆಷ್ಟೋ ಮಂದಿಯ ದೇಹಗಳು ಚಿತೆಯಲ್ಲಿ ಉರಿಯುತ್ತಿರುವಾಗ; ಈ ಸಂಕಷ್ಟದ ಸಮಯದಲ್ಲಿ ಉಳ್ಳವರು ಶಾಸಕರನ್ನು ಸಮ್ಮಾನಿಸುವ ಮೂಲಕ ಓಲೈಕೆ ಮಾಡಹೊರಟದ್ದು ಯಾಕೆ ಎಂಬ ಪ್ರಶ್ನೆ ತಾಲೂಕಿನ ನಾಗರಿಕರನ್ನು ಕಾಡತೊಡಗಿದೆ.ಕೋವಿಡ್ ನಿರ್ವಹಣೆಗಾಗಿ ತೀರಾ ಗ್ರಾಮೀಣ ಗುಡ್ಡಗಾಡಿನ ಪ್ರದೇಶವಾದ ನೆರಿಯ ಗ್ರಾಮ ಪಂಚಾಯತ್ಗೆ ‘ಆಪ್ತರಕ್ಷಕ’ ವಾಹನ ನೀಡಿದ್ದು ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಜಂಟಿಯಾಗಿ ಮಾಡಿದ ಸ್ತುತ್ಯಾರ್ಹ ಕಾರ್ಯ. ಇದೇ ಸಂದರ್ಭದಲ್ಲಿ ಕೊರೋನಾ ಫ್ರಂಟ್ಲೈನ್ ವಾರಿಯರ್ಸ್ ಆಗಿ ಕಾಲ್ನಡಿಗೆಯಲ್ಲೇ ಮನೆಮನೆಗೆ ತೆರಳಿ ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯ (ಸೇವೆ) ಸಲ್ಲಿಸುತ್ತಿರುವ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ 6ಮಂದಿ ಆಶಾ ಕಾರ್ಯಕರ್ತೆಯರನ್ನು ಹಾಗೂ ಓರ್ವ ದಾದಿಯನ್ನು ಗುರುತಿಸಿ ಗೌರವಿಸಿ, ಕಿಟ್ ನೀಡಿದ್ದೂ ಮಾನವೀಯ ಕಾರ್ಯ. ಆದರೆ ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ಅಭಿವೃದ್ಧಿ ಅಧಿಕಾರಿ ಗಾಯತ್ರಿ ಹಾಗೂ ನೆರಿಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ವಾಣಿಶ್ರೀಯವರಿಗೆ ಇದೇ ಕಾರ್ಯಕ್ರಮದಲ್ಲಿ ಸಮ್ಮಾನಿಸಿ ಗೌರವಿಸಿದ್ದು ಯಾಕೆ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. ಅಂತೆಯೇ ಶಾಸಕರಾಗಿ ಮೂರು ವರ್ಷ ಪೂರೈಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರನ್ನೂ ಇದೇ ಕಾರ್ಯಕ್ರಮದಲ್ಲಿ ಸಮ್ಮಾನಿಸುವ ಮೂಲಕ ಕಾರ್ಯಕ್ರಮ ಸಂಘಟಕರಾದ ಬೆಳ್ತಂಗಡಿಯ ರೋಟರಿ ಕ್ಲಬ್ ಹಾಗೂ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದವರು ಕನ್ನಡಿಗರಿಗೆ ಕವಿ ನಿಸಾರ್ ಅಹಮ್ಮದ್ ರಚಿಸಿದ ‘ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂತ ದೃಶ್ಯಾ… ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವರ್ಷ…ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈಹೊತ್ತ ಬಡವನೊಬ್ಬಾ…. ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬ…’ ಹಾಡನ್ನು ನೆನಪಿಸಿದ್ದಾರೆ.ಇಂತಹ ಕಾರ್ಯಕ್ರಮಕ್ಕೆ ನೆರಿಯ ಚರ್ಚ್ನ ಧರ್ಮಗುರು ವಂದನೀಯ ಶಾಜು ಮ್ಯಾಥ್ಯೂ, ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್, ರಾಜೇಶ್ ಪೈ, ಬೆಳ್ತಂಗಡಿ ರೋಟರಿ ಕ್ಲಬ್ನ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ ಕೆ. ವಿ., ನಿಯೋಜಿತ ಅಧ್ಯಕ್ಷ ಶರತ್ಕೃಷ್ಣ ಪಡ್ವೆಟ್ಣಾಯ, ನಿಯೋಜಿತ ಕಾರ್ಯದರ್ಶಿ ಅಬೂಬಕರ್, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಶಶಿಧರ್ ಕಲ್ಮಂಜ, ನೆರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಶಲ, ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು, ನೆರಿಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳ ಸಹಿತ ಗ್ರಾಮಸ್ಥರು ಸಾಕ್ಷಿಯಾದರು.






