ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿಯವರು ಮೇ 18ರಂದು ಮುಂಡಾಜೆಯಲ್ಲಿ ಆಯೋಜಿಸಿದ ಮುಂಡಾಜೆ ಗ್ರಾಮ ಪಂಚಾಯತ್ಗೆ ಕೊರೋನಾ ಸಂದರ್ಭ ತುರ್ತು ಅಗತ್ಯಕ್ಕಾಗಿ ನೀಡಿದ ‘ಆಪ್ತರಕ್ಷಕ’ ವಾಹನದ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಓರ್ವ ಜನಪ್ರತಿನಿಧಿ ಹಾಗೂ ಓರ್ವ ಆಶಾ ಕಾರ್ಯಕರ್ತೆಗೆ ಕೊರೋನಾ ಪಾಸಿಟಿವ್ ವರದಿಯಾಗಿದ್ದು; ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ನ ಸದಸ್ಯರು ಮತ್ತು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರೆಲ್ಲರೂ ಕೊರೋನಾ ಟೆಸ್ಟ್ ಮಾಡಿಸುವುದರ ಜೊತೆಗೆ ಇವರೆಲ್ಲಾ ಸೋಂಕಿತರ ಪ್ರಥಮ ಸಂಪರ್ಕಿತರಾದ್ದರಿಂದ ಸಾಮಾಜಿಕ ಬದ್ಧತೆ ಅರಿತು ಹದಿನಾಲ್ಕು ದಿನಗಳ ಕಾಲ ಸೆಲ್ಫ್ ಕ್ವಾರಂಟೈನ್ ಆಗಬೇಕಾದ ಸ್ಥಿತಿ ಎದುರಾಗಿದೆ.ಈ ಕಾರ್ಯಕ್ರಮದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಪ್ರಮುಖರಾದ ಮೋಹನ್ ಕುಮಾರ್ ಉಜಿರೆ, ರಾಜೇಶ್ ಪೈ ಉಜಿರೆ, ತಂಡದ ಸದಸ್ಯರು, ಬೆಳ್ತಂಗಡಿ ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಶರತ್ಕೃಷ್ಣ ಪಡ್ವೆಟ್ಣಾಯ, ನಿಯೋಜಿತ ಕಾರ್ಯದರ್ಶಿ ಅಬೂಬಕರ್ ಉಜಿರೆ, ಕಾರ್ಯದರ್ಶಿ ಶ್ರೀಧರ್ ಕೆ. ವಿ., ಉಜಿರೆ, ರೋಟರಿ ಕ್ಲಬ್ ಸದಸ್ಯರು, ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಬೆಳ್ತಂಗಡಿ ತಾಲೂಕು ಪಂಚಾಯತ್ನ ಮಾಜಿ ಸದಸ್ಯ ಶಶಿಧರ ಕಲ್ಮಂಜ, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಜಿನಿ ರವಿ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ. ಎಸ್. ಸುಮಾ, ಮುಂಡಾಜೆ ಗ್ರಾಮ ಲೆಕ್ಕಿಗ ರಾಘವೇಂದ್ರ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ಕಾವ್ಯಾ ವೈಪಣ, ಆಶಾ ಕಾರ್ಯಕರ್ತೆಯರ ಸಹಿತ ಸಾಕಷ್ಟು ಮಂದಿ ಭಾಗವಹಿಸಿದ್ದರು.ಕೊರೋನಾ ಸೋಂಕು ಹರಡುವ ಇಂದಿನ ಸಂಕಷ್ಟದ ದಿನಗಳಲ್ಲಿ ತಮ್ಮ ಜೀವದ ಹಂಗು ತೊರೆದು ತಾಲೂಕಿನ ವಿವಿದೆಡೆ ತೆರಳಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರ ಸಹಿತ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯಾತಿಗಣ್ಯರೆಲ್ಲರೂ ತಮ್ಮಿಂದ ಕೊರೋನಾದ ಅಪಾಯ ಊರಿಡೀ ಆಗದಿರಲಿ ಎಂಬ ಪ್ರಜ್ಞೆಯಿಂದ ಮುನ್ನೆಚ್ಛರಿಕೆಗಾಗಿ ತಮ್ಮ ಸೇವಾ ಕಾರ್ಯಕ್ರಮ ಮುಂದುವರಿಸುವ ಮುನ್ನ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲಿ; ಹಾಗೂ ಸೋಂಕಿತರ ಪ್ರಥಮ ಸಂಪರ್ಕಿತರಾದ ಇವರೆಲ್ಲರೂ ಸೆಲ್ಫ್ ಕ್ವಾರಂಟೈನ್ ಆಗಿ ಇತರರಿಗೆ ಮಾದರಿಯಾಗಲಿ ಎಂಬುದು ತಾಲೂಕಿನಲ್ಲಿ ಸರಕಾರದ ಲಾಕ್ಡೌನ್ ಘೋಷಣೆ ಗೌರವಿಸಿ, ಮನೆಯಲ್ಲೇ ಇದ್ದು ಕೊರೋನಾ ನಿಯಂತ್ರಣಕ್ಕೆ ಸರಕಾರದೊಂದಿಗೆ ಪ್ರಾಮಾಣಿಕವಾಗಿ ಕೈಜೋಡಿಸಿ ಕೊರೋನಾ ನಿಯಂತ್ರಣಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿರುವ 90%ಕ್ಕಿಂತಲೂ ಅಧಿಕ ಕಾನೂನುಪಾಲಕ ನಾಗರಿಕರ ಅಭಿಪ್ರಾಯ.






