ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಸೋಂಕನ್ನು ದಿಟ್ಟತನದಿಂದ ಎದುರಿಸಿ ಗೆದ್ದು ಬಂದವರ ಸಂಖ್ಯೆಯೂ ದೊಡ್ಡದಾಗಿ ಬೆಳೆಯುತ್ತಿರುವುದು ಸಮಾಧಾನಕರ ಅಂಶ.ಬೆಳ್ತಂಗಡಿ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾದ ಪೆರಾಡಿ ಗ್ರಾಮದ ರಾಂತಿಬೆಟ್ಟು ಮನೆಯ ಒಂದೇ ಕುಟುಂಬದ 13ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಇದೀಗ ಎಲ್ಲರೂ ಸೋಂಕಿನಿಂದ ಗುಣಮುಖರಾಗಿದ್ದಾರೆ.ಪೆರಾಡಿಯ ರಾಂತಿಬೆಟ್ಟು ಕುಟುಂಬಿಕರು ಇತ್ತೀಚೆಗೆ ಉಡುಪಿಯಲ್ಲಿನ ತಮ್ಮ ಹತ್ತಿರದ ಸಂಬಂಧಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಕುಂಟುಂಬದ ದಿನೇಶ್ ಅವರಿಗೆ ಮೇ 8ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಮರುದಿನ ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮನೆಯ ಎಲ್ಲಾ ಸದಸ್ಯರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಎಲ್ಲ 13 ಮಂದಿಗೂ ಕೊರೊನಾ ಸೋಂಕು ಪಾಸಿಟಿವ್ ಬಂದಿತ್ತು. ಇದರಲ್ಲಿ ಒಂದೂವರೆ ವರ್ಷದ ಮಗು ಹಾಗೂ 11ವರ್ಷದ ಪುಟಾಣಿಯೂ ಸೇರಿರುವುದು ಮನೆಯವರ ಮಾತ್ರವಲ್ಲ; ಊರವರ ಆತಂಕವನ್ನೂ ಹೆಚ್ಚಿಸಿತ್ತು. ಅಷ್ಟೇ ಅಲ್ಲ, 63 ವರ್ಷದ ವೃದ್ಧೆಗೂ ಸೋಂಕು ತಗುಲಿತ್ತು. ಇನ್ನುಳಿದ 10 ಮಂದಿಯ ವರದಿ ನೆಗೆಟಿವ್ ಬಂದಿದ್ದರೂ, ಅವರೂ ಕೂಡಾ ಹೋಮ್ ಐಸೂಲೇಸನ್ನಲ್ಲಿದ್ದರು. ತಮಗೆ ಬಂದ ಕೊರೋನಾ ಸೋಂಕನ್ನು ಧೈರ್ಯದಿಂದ ಸವಾಲಾಗಿ ತೆಗೆದುಕೊಂಡ ಈ ಕುಟುಂಬ ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಂಡರು. ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಟಾಸ್ಕ್ಪೋರ್ಸ್ ಸಲಹೆ, ಸೂಚನೆಗಳನ್ನು ಚಾಚುತಪ್ಪದೆ ಪಾಲಿಸುತ್ತಿದ್ದರು. ಬಿಸಿಬಿಸಿ ಆಹಾರ ಪದಾರ್ಥ, ಕಷಾಯ, ಮತ್ತಿತರ ಮನೆಮದ್ದು ತಯಾರಿಸಿ ಸೇವಿಸುತ್ತಿದ್ದರು.ಇದೀಗ ಎಲ್ಲರ ವರದಿ ನೆಗೆಟಿವ್ ಬಂದಿದ್ದು, 15 ದಿನಗಳ ಹೋಮ್ ಕ್ವಾರಂಟೈನ್ ಕಟ್ಟುನಿಟ್ಟಾಗಿ ಮುಗಿಸಿ ಎಲ್ಲರೂ ಆರೋಗ್ಯವಾಗಿದ್ದಾರೆ. ಇವರು ತಮ್ಮಿಂದ ಬೇರೆಯವರಿಗೆ ಸೋಂಕು ಹರಡದಂತೆ ಜಾಗೃತೆ ವಹಿಸಿದ್ದು, ಇತರರಿಗೆ ಮಾದರಿಯಾಗಿದೆ.ಮನೆಯಲ್ಲಿದ್ದೇ ಚಿಕಿತ್ಸೆ, ಆಹಾರ ಅನುಸರಿಸಿದೆವು. ಗ್ರಾಮದ ಟಾಸ್ಕ್ಪೋರ್ಸ್ ಟೀಂ ಉತ್ತಮ ಸಹಕಾರ ನೀಡಿತ್ತು. ಪ್ರತಿಯೊಬ್ಬರೂ ನಿಷ್ಠೆಯಿಂದ ತಮ್ಮ ಜವಾಬ್ದಾರಿ ಅರಿತು ಮುಂಜಾಗೃತ ಕ್ರಮ ಅನುಸರಿಸಿದರೆ ಇನ್ನೊಬ್ಬರಿಗೆ ಹರಡದಂತೆ ತಡೆಗಟ್ಟಬಹುದು ಎಂದು ಕೊರೋನಾ ಗೆದ್ದು ಬಂದ ರಾಂತಿಬೆಟ್ಟು ಕುಟುಂಬದ ಸದಸ್ಯ ದಿನೇಶ್ ಅಭಿಪ್ರಾಯಿಸಿದ್ದಾರೆ.






