ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಎಲ್ಲ ಕ್ರಮ-ಕೋಟ

ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಎಲ್ಲ ಕ್ರಮ-ಕೋಟ
Facebook
Twitter
LinkedIn
WhatsApp

ಬೆಳ್ತಂಗಡಿ: ಮಂಗಳೂರಲ್ಲಿ ಮೇ 25ರಂದು ಮಕ್ಕಳ ತಜ್ಞರ ಜೊತೆ ಸಮಾಲೋಚನಾ ಸಭೆ ಆಯೋಜಿಸಲಾಗಿದ್ದು, ಎಳೆಯ ಮಕ್ಕಳ ಮೇಲೆ ಬರಬಹುದಾದ ಕೊರೋನಾ ಮೂರನೇ ಅಲೆಯನ್ನು ನಿಯಂತ್ರಣದಲ್ಲಿರಿಸಲು ಸರ್ವ ತಯಾರಿ ಮಾಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.ಅವರು ಮೇ 24ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಳದ ವಠಾರದಲ್ಲಿ ಅಳದಂಗಡಿ ಸತ್ಯದೇವತಾ ದೈವಸ್ಥಾನದ ವತಿಯಿಂದ ವತಿಯಿಂದ ಅಳದಂಗಡಿ ಹಾಗೂ ನಾರಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 80 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ ರೂಪಾಯಿ 3,000ದಂತೆ ಒಟ್ಟು ರೂಪಾಯಿ 2,40,000 ಗೌರವಧನ ವಿತರಿಸಿ ಮಾತನಾಡುತ್ತಿದ್ದರು.ಮೂರನೇ ಅಲೆಯ ಬಗ್ಗೆ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಸಮಾಲೋಚನೆಯ ಬಳಿಕ ಹೊಸ ಮಾರ್ಗ ಸೂಚಿ ಮೇರೆಗೆ ತಜ್ಞರ ತಂಡ ಕಾರ್ಯನಿರ್ವಹಿಸಲಿದೆ. ಜಿಲ್ಲೆಯಲ್ಲೂ ಈ ಬಗ್ಗೆ ಸಭೆ ನಡೆಯಲಿದ್ದು ಪರಿಹಾರೋಪಾಯಗಳನ್ನು ನಿರ್ಧರಿಸಲಾಗುವುದು. ಜಿಲ್ಲೆಯಲ್ಲಿನ ಕೇಂದ್ರ ಸರಕಾರದ ಸ್ವಾಮ್ಯತೆಯ ಉದ್ಯಮಗಳು ಕೊರೋನಾ ಹತೋಟಿಗೆ ಅಂಬುಲೆನ್ಸ್, ಆಕ್ಸಿಜನ್ ಇತ್ಯಾದಿಗಳನ್ನು ಒದಗಿಸುವ ಕಾರ್ಯ ಮಾಡಿದೆ. ತಾಲೂಕಿನಲ್ಲಿ ಶಾಸಕರು ಕಠಿಣ ಪರಿಸ್ಥಿತಿಯಲ್ಲಿ ಪೂರ್ಣ ಸಮಯವನ್ನು ಮೀಸಲಿಟ್ಟಿದ್ದಾರೆ. ಜೀವವನ್ನು ಪಣವಾಗಿಟ್ಟುಕೊಂಡು ಆಶಾ ಕಾರ್ಯಕರ್ತೆಯವರು ಕಾರ್ಯನಿರ್ವಹಿಸುತ್ತಿದ್ದು ಸರಕಾರ ಇವರಿಗೆ ಯಾವುದೇ ಸೌಲಭ್ಯ ನೀಡಲು ಸಿದ್ದವಾಗಿದೆ. ಆಶಾ ಕಾರ್ಯಕರ್ತೆಯರನ್ನು ಅವಮಾನಿಸುವ ಕೆಲಸ ಯಾರಾದರೂ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸರಕಾರ ಅವರ ರಕ್ಷಣೆಗೆ ಬದ್ಧವಾಗಿದೆ ಎಂದರು.ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ರೋಗಿಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ವೆನ್‍ಲಾಕ್‍ನಲ್ಲಿ ಈ ಹಿಂದೆ 12 ವೆಂಟಿಲೇಟರ್ ಮಾತ್ರ ಇದ್ದದ್ದು ಈಗ 130 ಇವೆ. ಜಿಲ್ಲೆಯ ಎಲ್ಲ ಸಂಘಸಂಸ್ಥೆಗಳು ಸೇರಿ ಕೊರೋನಾ ಸೋಂಕು ಹತೋಟಿಗೆ ಸರಕಾರದೊಂದಿಗೆ ಕೈಜೋಡಿಸುತ್ತಿದೆ. ಅತಿ ಹೆಚ್ಚಿನ ಮನೆಗಳ ದರ್ಶನ ಮಾಡುತ್ತಿರುವವರು ಆಶಾ ಕಾರ್ಯಕರ್ತೆಯರು. ಅವರಿಗೆ ನೆರವಾಗುವುದು ಮಾನವೀಯ ಕೆಲಸ. ಇದನ್ನು ಅಳಂದಗಡಿ ಅರಸರು ಹಾಗೂ ಅವರ ಸಹೋದರರಾದ ಶಿವಪ್ರಸಾದ ಅಜಿಲರು ಮಾಡುತ್ತಿರುವುದು ಮಾದರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಮಾತನಾಡಿ, ಪ್ರತಿ ಪಂಚಾಯತಿಗೊಂದರಂತೆ ತುರ್ತು ಅಗತ್ಯಕ್ಕೆ ಅಂಬ್ಯುಲೆನ್ಸ್ ಇರುವಂತೆ ಸರಕಾರ ಚಿಂತನೆ ನಡೆಸಬೇಕು. ಆಶಾ ಕಾರ್ಯಕರ್ತೆಯರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗಿದೆ ಎಂದರು. ವೇದಿಕೆಯಲ್ಲಿ ಶಾಸಕ ಹರೀಶ ಪೂಂಜ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬಿಜೆಪಿ ಬೆಳ್ತಂಗಡಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು. ಸತ್ಯದೇವತೆ ದೈವಸ್ಥಾನದ ಆಡಳಿತೆದಾರ ಶಿವಪ್ರಸಾದ ಅಜಿಲ ಸ್ವಾಗತಿಸಿ, ಪ್ರಸ್ತಾವಿಸಿದರು. ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು. ಮೋಹನದಾಸ ಕಾರ್ಯಕ್ರಮ ನಿರ್ವಹಿಸಿದರು.

Latest News

Related Posts