ಬೆಳ್ತಂಗಡಿ: ಕೊರೋನಾದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಮಾನಸಿಕ ಅಸ್ವಸ್ಥರ ಹಾಗೂ ನಿರ್ಗತಿಕರ ಪೋಷಣಾ ಹಾಗೂ ಚಿಕಿತ್ಸಾ ಕೇಂದ್ರವಾದ ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಸಮಾನಮನಸ್ಕ ದಾನಿಗಳು ಸೇರಿ ಸಂಗ್ರಹಿಸಿದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಔಷಧಿ ಸಹಿತ ಅಗತ್ಯ ವಸ್ತುಗಳನ್ನು ಮೇ 26ರಂದು ಹಸ್ತಾಂತರಿಸಲಾಯಿತು.ಆಶ್ರಮದ ರೋಗಿಗಳಿಗೆ ಹಾಗೂ ವಾಸಿಗಳಿಗೆ ತುರ್ತು ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಅಗತ್ಯ ಔಷಧಿ ಹಾಗೂ ಇನ್ನಿತರ ವಸ್ತುಗಳು ಈ ಕೊಡುಗೆಯಲ್ಲಿ ಒಳಗೊಂಡಿರುತ್ತದೆ. ಬೆಳ್ತಂಗಡಿತಾಲೂಕು ತಹಶಿಲ್ದಾರ್ ಮಹೇಶ್ ಜೆ., ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ತಾಲೂಕು ಆರೋಗ್ಯಾಧಿಕಾರಿ ಡಾl ಕಲಾಮಧು, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರು ಸದ್ರಿ ಕಿಟ್‌ಗಳನ್ನು ಹಸ್ತಾಂತರಿಸಿದರು. ಅಧ್ಯಕ್ಷತೆ ವಹಿಸಿದ್ದ ಗಂಡಿಬಾಗಿಲು ಸೈಂಟ್ ಥೋಮಸ್ ಚರ್ಚ್‌ನ ಧರ್ಮಗುರು ವಂದನೀಯ ಶಾಜಿ ಮ್ಯಾಥ್ಯೂ ಮಾತನಾಡಿ ದೇಣಿಗೆ ನೀಡಿದವರನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ. ಸಿ. ಸೆಬಾಸ್ಟಿಯನ್, ಕೋವಿಡ್ ಸೋಲ್ಜರ್ಸ್ ತಂಡದ ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ ಮುಂಡಾಜೆ, ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮನೋಜ್ ಎಂ. ಡಿ., ವಿನ್ಸೆಂಟ್ ಡಿಪೌಲ್ ಸೋಸೈಟಿಯ ಚಾಂಡಿ ಸಿ. ವಿ., ಮುಂಡಾಜೆ ಸಹಕಾರಿ ಸಂಘದ ನೆರಿಯ ಶಾಖೆ ವ್ಯವಸ್ಥಾಪಕ ಚಂದ್ರಕಾಂತ ಪ್ರಭು, ನೆರಿಯ ಗ್ರಾಮ ಪಂಚಾಯತ್ ಸದಸ್ಯ ಬಾಬು ಗೌಡ, ವಾಸು, ಉಪಸ್ಥಿತರಿದ್ದರು. ದೇಣಿಗೆ ಸ್ವೀಕರಿಸಿದ ಸಿಯೋನ್ ಆಶ್ರಮ ಟ್ರಸ್ಟಿ ಯು.ಸಿ ಪೌಲೋಸ್ ಆಶ್ರಮದ ಸ್ಥಿತಿಗತಿ ವಿವರಿಸಿದರು. ಜಾನುವಾರುಗಳಿಗೆ ಮೇವು, ಆಂಬುಲೆನ್ಸ್ ಸೇವೆ ಸಹಿತ ಸಕಲ ನೆರವು ಬೇಕು ಎಂದು ದಾನಿಗಳಲ್ಲಿ ವಿನಂತಿಸಿದರು.ದೇಣಿಗೆ ನೀಡಿದ ಗಂಡಿಬಾಗಿಲು ಚರ್ಚ್, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಾಗೂ ಕಕ್ಕಿಂಜೆ ಭಿಡೆಮೆಡಿಕಲ್ಸ್‌ನ ಸುಜಿತ್ ಭಿಡೆ, ಲೆಫ್ಟಿನೆಂಟ್ ಕರ್ನಲ್ ನಿತಿನ್ ಭಿಡೆ, ತೋಮಸ್ ನಂದಲತ್ ರಾಯ್, ಡಾlಕೆ. ವಿ. ಮೂರ್ತಿ ಹಾಗೂ ಇತರ ದಾನಿಗಳನ್ನು ಸ್ಮರಿಸಿ ಕಾರ್ಯಕ್ರಮದಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.






