ಸತ್ಯಸ್ಥಳದಲ್ಲೇ ಕಾನೂನಿಗೆ ಸವಾಲು – ಧರ್ಮಸ್ಥಳ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಗೆ ಲಾಬಿ!

ಸತ್ಯಸ್ಥಳದಲ್ಲೇ ಕಾನೂನಿಗೆ ಸವಾಲು – ಧರ್ಮಸ್ಥಳ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಗೆ ಲಾಬಿ!
Facebook
Twitter
LinkedIn
WhatsApp

ಬೆಳ್ತಂಗಡಿ: ಕೆಲ ದಿನಗಳ ಹಿಂದೆಯಷ್ಟೆ ಉಜಿರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಬಿಜೆಪಿಯ ಸ್ಥಳೀಯ ಪ್ರಭಾವಿಗಳು ಹಾಗೂ ಕೆಲ ಗ್ರಾಮ ಪಂಚಾಯತ್ ಸದಸ್ಯರು ಲಾಬಿ ನಡೆಸಿ, ತಮಗೆ ಬೇಕಾದವರಿಗೆ ಮಾತ್ರ ಕೋವಿಡ್ ಲಸಿಕೆ ದೊರಕಿಸಿಕೊಡುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಮೇ 26ರಂದು ಉಜಿರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿ, ಆದ್ಯತೆ ನೆಲೆಯಲ್ಲಿ ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿದವರಿಗೆ ಲಸಿಕೆ ನೀಡುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರಲ್ಲದೇ; ‘ಬಿಜೆಪಿಯ ಸ್ಥಳೀಯ ನಾಯಕರಾಗಲೀ, ಗ್ರಾಮ ಪಂಚಾಯತ್ ಸದಸ್ಯರಾಗಲೀ ತಮ್ಮ ಪರಿಚಯಸ್ಥರಿಗೆ ಲಸಿಕೆ ನೀಡುವಂತೆ ವೈದ್ಯಾಧಿಕಾರಿಗಳ‌ ಮೇಲೆ ಪ್ರಭಾವ ಬೀರಬಾರದು; ಇದಕ್ಕಾಗಿ ನನ್ನ ಹೆಸರು ಬಳಸಬಾರದು’ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದೀಗ ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸರದಿ. ಇಲ್ಲಿ ತಮ್ಮವರಿಗೆ ಲಸಿಕೆ ಕೊಡಿಸಲು ಬಿಜೆಪಿಯ ಕೆಲ ಸ್ಥಳೀಯ ನಾಯಕರು ಹಾಗೂ ಕೆಲ ಗ್ರಾಮ ಪಂಚಾಯತ್ ಸದಸ್ಯರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೇಲೆ ಶಾಸಕ ಹರೀಶ್ ಪೂಂಜರ ಹೆಸರು ಬಳಸಿ ಪ್ರಭಾವ ಬೀರುತ್ತಿದ್ದು; ಲಸಿಕೆಗಾಗಿ ನೋಂದಣಿ ಮಾಡಿಕೊಂಡ ಸಾಕಷ್ಟು ಮಂದಿ ತಮ್ಮ ಸರದಿ ಬಂದರೂ ಲಸಿಕೆ ಸಿಗದೆ, ಸ್ಥಳೀಯ ಕೆಲ ಬಿಜೆಪಿ ನಾಯಕರ ಕೃಪಾಕಟಾಕ್ಷಕ್ಕೆ ಕಾಯುವಂತಾಗಿದೆ. ಸತ್ಯಸ್ಥಳವಾದ ಧರ್ಮಸ್ಥಳದಲ್ಲಿಯೇ ಸರಕಾರಿ ಕೆಲಸದಲ್ಲಿ ನ್ಯಾಯ ದೇವತೆ ಈ ರೀತಿಯಾಗಿ ಕಣ್ಣು ಮುಚ್ಚಿ ಕುಳಿತಿರುವುದರ ಸ್ಯಾಂಪಲ್ ಮಾತ್ರವೇ ಇದಾಗಿದ್ದು; ಇಲ್ಲಿ ಸರಕಾರದ ಆಸ್ತಿಯ ಹಗಲು ದರೋಡೆಯೇ ನಡೆಯುತ್ತಿದ್ದು, ಈ ವಿಷಯ ಗೊತ್ತಿದ್ದರೂ ಇಲಾಖಾಧಿಕಾರಿಗಳು ಏನೂ ಮಾಡಲಾಗದ ನಿರ್ವೀರ್ಯರಾಗಿದ್ದಾರೆ. ಈ ನೆಲದ ಕಾನೂನು ಗೌರವಿಸಿ ಬದುಕುವ ಇಲ್ಲಿನವರ ಸ್ಥಿತಿ ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತಾಗಿದೆ.

Latest News

Related Posts