ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಶಿಶಿಲೆಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿರುವ ದೇವರ ಮೀನೆಂದೆ ಪ್ರಖ್ಯಾತವಾದ ಪೆರುವೊಳು ಜಾತಿಯ ಮತ್ಸ್ಯಗಳು ಪ್ರವಾಸಿಗರಿಗೆ ನಿರಂತರ ಮುದ ನೀಡುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ನಿತ್ಯ ಅವುಗಳಿಗೆ ಆಹಾರ ಒದಗಿಸುತ್ತಿದ್ದರು. ಆದರೆ ಇದೀಗ ಕೊರೊನಾ ಮುಂಜಾಗ್ರತೆಯಾಗಿ ಲಾಕ್ಡೌನ್ ಇರುವುದರಿಂದ ಭಕ್ತಾದಿಗಳು ಕೋವಿಡ್ ನಿಯಮದಂತೆ ದೇಗುಲಕ್ಕೆ ಬರುತ್ತಿಲ್ಲ. ಇದರಿಂದ ಮತ್ಸ್ಯಗಳಿಗೂ ಆಹಾರ ಹಾಕುವವರಿಲ್ಲ. ತೀರಾ ಹಳ್ಳಿ ಪ್ರದೇಶವಾಗಿರುವುದರಿಂದ ದೇವಾಲಯಕ್ಕೆ ಆದಾಯವೂ ಇಲ್ಲ. ಇದನ್ನು ಗಮನಿಸಿದ ಊರ ಪರವೂರಿನ ಭಕ್ತರು ದೇವರ ಮೀನಿಗೆ ನಿತ್ಯ ಆಹಾರ ಒದಗಿಸುವಲ್ಲಿ ನಿರತರಾಗಿದ್ದಾರೆ. ದಿನಕ್ಕೆ ಇಬ್ಬರು ಅಥವಾ ಮೂರು ಮಂದಿಯಂತೆ ಹಸಿದ ದೇವರ ಮೀನುಗಳಿಗೆ ಹರಳು, ಅಕ್ಕಿ ಸಮರ್ಪಿಸುತ್ತಿದ್ದಾರೆ. ದೂರದ ಬೆಂಗಳೂರಿನ ಭಕ್ತರೂ ಈ ಸೇವಾ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಗ್ರಾಮದ ಭಕ್ತಾಧಿಗಳೂ ಅಕ್ಕಿಯನ್ನು ಕಳುಹಿಸಿಕೊಡುತ್ತಿದ್ದಾರೆ. ಅಂತೂ ದೇವರ ಮೀನೆಂದೆ ಖ್ಯಾತಿ ಪಡೆದ ಶಿಶಿಲ ಮತ್ಸ್ಯಗಳಿಗೆ ಭಕ್ತರು ಸ್ಪಂದಿಸುವ ರೀತಿ ಅಭಿನಂದನೀಯ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೀನಿವಾಸ ಮೂಡೆತ್ತಾಯ, ಅಭಿವೃದ್ಧಿ ಸಮಿತಿಯ ಅದ್ಯಕ್ಷ ಆನಂದ ಪೂಜಾರಿ, ಮತ್ಸ್ಯ ಹಿತರಕ್ಷಣಾ ವೇದಿಕೆ ಅದ್ಯಕ್ಷ ಬಿ. ಜಯರಾಮ ನೆಲ್ಲಿತ್ತಾಯ ಹಾಗೂ ಸಮಿತಿಯ ಸದಸ್ಯರು ಸಂತಸ ಹಾಗೂ ನೆಮ್ಮದಿ ವ್ಯಕ್ತಪಡಿಸಿರುತ್ತಾರೆ.






