ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್‌ನ ಗಾಂಧಿನಗರ ಕಾಲನಿಯಲ್ಲಿ ಹತ್ತಕ್ಕೂ ಅಧಿಕ ಮಂದಿ ಕೊರೋನಾ ಪೀಡಿತರಾಗಿದ್ದು, ಗ್ರಾಮ ಪಂಚಾಯತ್ ವತಿಯಿಂದ ಸರಕಾರದ ಕೋವಿಡ್-19 ನಿಯಮಾವಳಿಯಂತೆ ಈ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿತ್ತು.ಇದೀಗ ಈ ಪ್ರದೇಶದ ಎಲ್ಲ ಸೋಂಕಿತರೂ ಕೊರೋನಾದಿಂದ ಗುಣಮುಖರಾಗಿದ್ದು; ಗಾಂಧಿನಗರ ಕಾಲನಿಗೆ ಭೇಟಿ ನೀಡಿದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕೊರೋನಾದಿಂದ ಗುಣಮುಖರಾದವರಿಗೆ ಸಿಹಿಹಂಚಿ ಕಾಲನಿಯನ್ನು ಕಂಟೆನ್ಮೆಂಟ್ ಝೋನ್‌ನಿಂದ ಮುಕ್ತಗೊಳಿಸಿದರು. ತಮ್ಮ ಕಾಲನಿ ಕೊರೋನಾ ಮುಕ್ತವಾದ ಬಗ್ಗೆ ಗಾಂಧಿನಗರ ಕಾಲನಿಯ ನಿವಾಸಿಗಳು ಸಂಭ್ರಮಿಸಿ ನಿಮ್ಮದಿಯ ನಿಟ್ಟುಸಿರು ಬಿಟ್ಟರು.ಇದೇ ಸಂದರ್ಭದಲ್ಲಿ ಅಸೌಖ್ಯದಿಂದ ಇತ್ತೀಚೆಗೆ ಮೃತರಾದ ಗಾಂಧಿನಗರ ಕಾಲನಿಯ ಒಂದೇ ಮನೆಯ ಎರಡು ದಂಪತಿಗಳ ಮನೆಯವರಿಗೆ ಗ್ರಾಮ ಪಂಚಾಯತ್ ಮೂಲಕ ತಲಾ ಹತ್ತು ಸಾವಿರ ರೂಪಾಯಿಗಳ ಸಹಾಯಧನ ಹಸ್ತಾಂತರಿಸಲಾಯಿತು.






