ಬೆಳ್ತಂಗಡಿ: ಕೋವಿಡ್ ಎರಡನೇ ಅಲೆಯಿಂದ ಜೀವ ಉಳಿಸಿ-ಜೀವನ ರಕ್ಷಿಸಿ; ಮೂರನೇ ಅಲೆ ಎದುರಿಸಲು ಸರ್ವಸನ್ನದ್ಧರಾಗಿ ಎಂಬ ಘೋಷಣೆಗಳಡಿ 7 ಎಡಪಕ್ಷಗಳ ಒಕ್ಕೂಟದ ಕರೆಯಂತೆ ರಾಜ್ಯವ್ಯಾಪಿ ಪ್ರತಿಭಟನೆಯ ಭಾಗವಾಗಿ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಸಾರ್ವತ್ರಿಕ ಉಚಿತ ಲಸಿಕೆ, ಔಷಧಿ ಮತ್ತು ಚಿಕಿತ್ಸೆಗಾಗಿ;ರೈತರು, ಕಾರ್ಮಿಕ ವಿರೋಧಿ ಕಾನೂನುಗಳ ರದ್ಧತಿಗಾಗಿ; 200 ದಿನಗಳ ಉದ್ಯೋಗ ಖಾತ್ರಿಗಾಗಿ; ನಗರಗಳಿಗೂ ಉದ್ಯೋಗ ಖಾತರಿ ಯೋಜನೆಯ ವಿಸ್ತರಣೆಗಾಗಿ;ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಶಿವಕುಮಾರ್ ಎಸ್. ಎಂ., ಕೇಂದ್ರ ಸರ್ಕಾರ ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಅತ್ಯಂತ ಬೇಜಾವ್ದಾರಿತನದಿಂದ ವರ್ತಿಸುತ್ತಿದೆ. ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ನೀಡಲು ಸಾಧ್ಯವಿಲ್ಲದ ಕೇಂದ್ರ ಸರ್ಕಾರ ವಿದೇಶಕ್ಕೆ ಲಸಿಕೆ ಮಾರಾಟ ಮಾಡುವ ಮೂಲಕ ಇದೊಂದು ವ್ಯಾಪಾರಿ ಸರ್ಕಾರವಾಗಿ ಪರಿವರ್ತನೆಗೊಂಡಿದೆ. ಚುನಾವಣಾ ಸಂದರ್ಭದಲ್ಲಿ ನಾವು ದೇಶದ ಪರವಾಗಿದ್ದೇವೆ ಎಂದು ಸುಳ್ಳು ಹೇಳಿದ ಸರ್ಕಾರ ಇದೀಗ ವಿದೇಶಿಗರ, ಬಂಡವಾಳಶಾಹಿಗಳ ಬೂಟ್ ಕಾಯುವ ನೀಚತನ ಮಾಡುವ ಮೂಲಕ ದೇಶದ ಜನರನ್ನು ಬೀದಿಯಲ್ಲಿ ಸಾವಿಗೆ ತಳ್ಳುವ ನೀಚತನದ ರಾಜಕೀಯ ಮಾಡುತ್ತಿದೆ ಎಂದರು. ಉಚಿತ ಔಷಧ, ಆಕ್ಸಿಜನ್, ವೆಂಟಿಲೇಶನ್ ಸಿಗದೆ ನಾಯಿಗಿಂತ ಕಡೆಯಾಗಿ ಬೀದಿಬೀದಿಗಳಲ್ಲಿ ಜನಸಾಮಾನ್ಯರು ಸತ್ತರೂ ಪ್ರಧಾನಿ ನರೇಂದ್ರ ಮೋದಿ ನರಸತ್ತವರಂತೆ ವರ್ತಿಸುತ್ತಿದ್ದಾರೆ. ಅಧಿಕಾರ ನಡೆಸಲು ತಾಕತ್ತಿಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಆಗ್ರಹಿಸಿದರು.ತಾಲೂಕು ಸದಸ್ಯರಾದ ಶೇಖರ್ ಲಾಯಿಲ, ಮುಖಂಡರಾದ ಸುಕನ್ಯಾ ಹೆಚ್., ಸುಜೀತ್ ಉಜಿರೆ, ರೋಹಿಣಿ ಪೆರಾಡಿ, ವಸಂತ ನಡ, ಭರತ್ ಕುಮಾರ್, ಸಂಜೀವ ಆರ್. ಉಜಿರೆ, ಸುಧಾ ಕೆ. ರಾವ್, ಸುಹಾಸ್ ಬೆಳ್ತಂಗಡಿ, ಸುದೀಪ್ ಬೆಳ್ತಂಗಡಿ, ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಹರಿದಾಸ್ ಎಸ್. ಎಂ. ಮತ್ತಿತರರು ಭಾಗವಹಿಸಿದ್ದರು.






