ಮೂಡುಬಿದಿರೆ : ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ದುಡಿಯುತ್ತಾ ಕೊರೋನಾ ಸಂಕಷ್ಟ ©ದಲ್ಲಿ ಮೇಳದ ತಿರುಗಾಟವೂ ಇಲ್ಲದೆ ಜೊತೆಗೆ ಬೇರೆ ಆದಾಯವೂ ಇಲ್ಲದೆ ಕಂಗೆಟ್ಟಿರುವ 37 ಮಂದಿ ಕಲಾವಿದರನ್ನು ಗುರುತಿಸಿ ಅವರಿಗೆ 25 ಕೆ.ಜಿ. ಅಕ್ಕಿ, ಬೇಳೆ, ಸಕ್ಕರೆ, ಬೆಲ್ಲ, ಎಣ್ಣೆ, ಸಾಬೂನು, ಮಸಾಲೆ ಸಾಮಗ್ರಿ, ಉಪ್ಪಿನಕಾಯಿ, ಚಹಾಹುಡಿ ಮತ್ತು ಬಿಸ್ಕೆಟ್ ಇರುವ ಆಹಾರದ ಕಿಟ್ ಅನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಸಮಾಜ ಮಂದಿರ ಸಭಾದ ಆವರಣದಲ್ಲಿ ವಿತರಿಸಲಾಯಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮಾತನಾಡಿ ಕಲಾವಿದರು ಶಕ್ತಿವಂತರಾಗಬೇಕು, ಇಂದು ಸಣ್ಣ ಕಲಾವಿದರಾಗಿರುವವರೂ ಮುಂದಕ್ಕೆ ದೊಡ್ಡ ಕಲಾವಿದರಾಗಿ ಬೆಳೆಯಬೇಕು. ಕಲಾವಿದರಿಗೆ ಶಿಕ್ಷಣ, ಆರೋಗ್ಯ, ಮನೆ, ಕೊರೋನಾ ಸಂಕಷ್ಟ ಕಾಲದಲ್ಲಿ ಆಹಾರದ ಕಿಟ್ ಇದನೆಲ್ಲಾ ನೀಡಿ ಸಹಕರಿಸುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.ಎಲ್ಲರನ್ನೂ ಸ್ವಾಗತಿಸಿದ ಮೂಡುಬಿದಿರೆ ಘಟಕದ ಅಧ್ಯಕ್ಷ ತೋಡಾರು ದಿವಾಕರ ಶೆಟ್ಟಿ ಅವರು ಮಾತನಾಡಿ ಕಳೆದ ವರ್ಷ ಕೊರೋನಾ ಸಂಕಷ್ಟ ಕಾಲದಲ್ಲಿ 48 ಮಂದಿ ಕಲಾವಿದರಿಗೆ ಹಾಗೂ ಈ ವರ್ಷ 36 ಮಂದಿಗೆ ಆಹಾರದ ಕಿಟ್ ಪಟ್ಲ ಫೌಂಡೇಶನ್ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರ ಸಹಕಾರದಿಂದಲೇ ವಿತರಿಸಿದ್ದೇವೆ. ಕನ್ನಡ ಭಾಷೆಯನ್ನು ಪರಿಶುದ್ಧವಾಗಿ ಉಚ್ಚರಿಸುವ ಏಕೈಕ ಮಾಧ್ಯಮ ಯಕ್ಷಗಾನವಾಗಿದ್ದು ಇದರ ಮೂಲಕ ನಿರಂತರವಾಗಿ ಕನ್ನಡದ ಪರ ಸಂಘಟನೆ, ಹೋರಾಟ ನಡೆಯುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎಂದರು.ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಚಾಲಕ ನೆಲ್ಲಿಮಾರ್ ಸದಾಶಿವ ರಾವ್ ಅವರು ಮಾತನಾಡಿ ಪುರಾಣ ಪಾತ್ರಗಳನ್ನು ನೆನಪಿಸುವ ಮೂಲಕ ಕಲಾವಿದರು ಧರ್ಮವನ್ನು ರಕ್ಷಿಸಿಕೊಂಡು ಬಂದಿದ್ದಾರೆ ಆದುದರಿಂದ ಕಲಾವಿದರನ್ನು ಧರ್ಮ ರಕ್ಷಿಸುತ್ತದೆ. ರಂಗಸ್ಥಳದಲ್ಲಿ ಇಂದ್ರ, ಚಂದ್ರ, ದೇವೇಂದ್ರನಾಗಿ ಮೆರೆಯುವ ಕಲಾವಿದ ರಂಗಸ್ಥಳದಿಂದ ಕೆಳಗಿಳಿದು ವೇಷ ಕಳಚಿದ ನಂತರ ಮೇಳದ ಯಜಮಾನರ ಎದುರು ಕೈಕಟ್ಟಿ ನಿಂತು “ದನಿಗಳೇ, ಮುಂಗಡ ಬೇಕು” ಎಂದು ಬೇಡುವ ಪರಿಸ್ಥಿತಿ ಕಲಾಪ್ರೇಮಿಗಳಿಗೆ ಅರ್ಥವಾಗಬೇಕು ಎಂದರು.ಫೌಂಡೇಶನ್ ನ ಉಪಾಧ್ಯಕ್ಷ ಎಂ. ಶಾಂತರಾಮ ಕುಡ್ವ ಅವರು ಮಾತನಾಡಿ ಪಟ್ಲ ಸತೀಶ್ ಶೆಟ್ಟಿಯವರು ಭಾಗವತರಾಗಿ ಸೇವೆಗೈಯುವ ಪಾವಂಜೆ ಮೇಳದ ಕಲಾವಿದರಿಗೆ ಮಾತ್ರವಲ್ಲದೆ ಯಾವುದೇ ಭೇಧ ಭಾವ ಮಾಡದೆ ದ.ಕ. ಜಿಲ್ಲೆಯ ಎಲ್ಲಾ ಮೇಳಗಳ ಹಿರಿಯ ಮತ್ತು ಕಿರಿಯ ಕಲಾವಿದರ ನೆರವಿಗೆ ಪಟ್ಲ ಸತೀಶ್ ಶೆಟ್ಟಿಯವರು ನಿಂತಿರುವುದು ಅವರಿಗೆ ಯಕ್ಷಗಾನ ಕಲೆಯ ಮೇಲೆ ಕಲಾವಿದರ ಮೇಲೆ ಇರುವ ಅನನ್ಯ ಪ್ರೀತಿಯನ್ನು ತೋರಿಸುತ್ತದೆ ಎಂದರು. ಕಲಾವಿದರ ಪರವಾಗಿ ವೇಣೂರು ಅಶೋಕ್ ಆಚಾರ್ಯ ಈ ನೆರವಿಗೆ ಕೃತಜ್ಞತೆ ಹೇಳಿದರು.ಫೌಂಡೇಶನ್ ನ ಗೌರವಾಧ್ಯಕ್ಷ ಪ್ರೇಮನಾಥ ಮಾರ್ಲ ಕೆ., ಕಾರ್ಯದರ್ಶಿ ಮನೋಜ್ ಶೆಟ್ಟಿ, ಪದಾಧಿಕಾರಿಗಳಾದ ನೀಲೇಶ್ ಶೆಟ್ಟಿ, ಸದಾಶಿವ ಶೆಟ್ಟಿಗಾರ್, ಅರುಣ್ ಕುಮಾರ್ ಸಮಾಜ ಮಂದಿರ ಮತ್ತಿತರರು ಉಪಸ್ಥಿತರಿದ್ದರು. ರವಿಪ್ರಸಾದ್ ಕೆ. ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ನೀರ್ಕೆರೆ ನಾಗರಾಜ ಆಚಾರ್ಯ ಸಹಕರಿಸಿದರು.






