ಬೆಳ್ತಂಗಡಿ: ಅದೊಂದು ಕಾಲವಿತ್ತು. ಜೂನ್ 5 ವಿಶ್ವ ಪರಿಸರ ದಿನದಂದು ವಿವಿಧ ಸಂಘಸಂಸ್ಥೆಗಳವರು ಎಲ್ಲೆಂದರಲ್ಲಿ ವನಮಹೋತ್ಸವ ಆಚರಿಸುವ ಸಂಭ್ರಮದಲ್ಲಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ನೆಡುತ್ತಿದ್ದರು. ಅರಣ್ಯ ಇಲಾಖೆಯವರೋ ಇಂತಹ ವನಮಹೋತ್ಸವಗಳಿಗೆ ಅಕೇಶಿಯಾ, ಮ್ಯಾಂಜಿಯಂನಂತಹ ಜಾತಿಯ ಸಸಿಗಳನ್ನು ನೀಡುತ್ತಿದ್ದರು. ಈ ರೀತಿಯಾಗಿ ಸಸಿಗಳನ್ನು ಪಡೆದ ಸಂಘಸಂಸ್ಥೆಯವರು ಅವುಗಳನ್ನು ನೆಟ್ಟು ಫೊಟೊ ತೆಗೆಯಿಸಿ, ತಮ್ಮ ಸೇವಾ ದಾಖಲೆಯಲ್ಲಿ ಇರಿಸಿಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಅವರು ನೆಟ್ಟ ಗಿಡಗಳತ್ತ ತಿರುಗಿ ನೋಡುವ ಸೇವಾ ಕಾರ್ಯವೂ ಬಹುತೇಕರಿಗೆ ಇರುತ್ತಿರಲಿಲ್ಲ. ಇಂತಹ ಸಂಘಟನೆಗಳಿಗೆ ಮತ್ತೆ ಸಸಿ ನೆಡುವ ಜಾಗೃತಿ ಮೂಡುವುದೇ ಮುಂದಿನ ವರ್ಷದ ಜೂನ್ 5ರಂದು; ಅಂದರೆ ಮತ್ತೊಂದು ವಿಶ್ವ ಪರಿಸರ ದಿನದಂದೇ. ಮತ್ತೆ ಹೊಸ ಅಕೇಶಿಯಾ ಅಥವಾ ಮ್ಯಾಂಜಿಯಂ ಸಸಿ ನೆಡುವ ಪರ್ವ ಆರಂಭ. ಯಾವತ್ತೂ ತಾವು ನೆಟ್ಟ ಗಿಡ ಪೋಷಿಸಬೇಕೆಂಬ ಚಿಂತನೆ ವನಮಹೋತ್ಸವ ಆಚರಿಸುವ ಬಹುತೇಕ ಸಂಘಟನೆಗಳಿಗೆ ಇಲ್ಲದಿರುವದೇ ಇಷ್ಟು ವರ್ಷ ನಿರಂತರ ವನಮಹೋತ್ಸವ ಕಾರ್ಯಕ್ರಮ ನಡೆದರೂ ಕಾಡು ಅಭಿವೃದ್ಧಿ ಆಗದಿರಲು ಕಾರಣ.ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರಕಾರ ವನಮಹೋತ್ಸವ ಕಾರ್ಯಕ್ರಮಗಳಲ್ಲಿ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಯೋಜನೆ ಕೈಗೊಂಡಿದೆ. ಈ ರೀತಿಯಾಗಿ ಕಾಡುಗಳಲ್ಲಿ ಇತರ ಮರಗಳ ಬದಲಿಗೆ ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದದ್ದು ಬೆಳ್ತಂಗಡಿಯ ಲಯನ್ಸ್ ಕ್ಲಬ್. 2014ನೇ ಇಸವಿಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿದ್ದ ಎನ್. ಎ. ಗೋಪಾಲ ಶೆಟ್ಟರ ನೇತೃತ್ವದಲ್ಲಿ ಅಂದು ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕನ್ಯಾಡಿ ಪಡ್ಪು ಅರಣ್ಯ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಹೊಸ ರೂಪ ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎನ್. ಎ. ಗೋಪಾಲ್ ಶೆಟ್ಟಿ, ಇವತ್ತು ಕಾಡಿನಲ್ಲಿರಬೇಕಾದ ಮಂಗಗಳು ಅಲ್ಲಿ ಆಹಾರ ಸಿಗದೇ, ಆಹಾರವನ್ನರಸಿ ಹಳ್ಳಿಗಳಿಗೆ ಪ್ರವೇಶಿಸಿ, ಕೃಷಿ ನಾಶ ಮಾಡುತ್ತಿದೆ. ಕಾಡಿನಲ್ಲಿದ್ದ ವಿವಧ ಜಾತಿಯ ಹಣ್ಣಿನ ಮರಗಳನ್ನು ಕಡಿದು ಸ್ವಾರ್ಥಕ್ಕೆ ಬಳಸಿಕೊಂಡ ನಾವು ನಂತರ ಕಾಡಿನಲ್ಲಿ ಮಂಗಗಳ ಸಹಿತ ಇತರ ಪ್ರಾಣಿ-ಪಕ್ಷಿಗಳಿಗೆ ಅಗತ್ಯವಾದ ಹಣ್ಣಿನ ಗಿಡಗಳನ್ನು ನೆಡುವ ಬದಲಾಗಿ ಅಕೇಷಿಯಾ, ಮ್ಯಾಂಜಿಯಂನಂತಹ ಗಿಡಗಳನ್ನು ನೆಟ್ಟೆವು. ಪರಿಣಾಮ ಕಾಡಿನಲ್ಲಿರಬೇಕಾದ ಮಂಗಗಳು ಹೊಟ್ಟೆಪಾಡಿಗಾಗಿ ಹಳ್ಳಿಗೆ ವಲಸೆ ಬಂದವು. ಮಂಗಗಳನ್ನು ಮತ್ತೆ ಕಾಡಿಗೆ ಅಟ್ಟಬೇಕಾದರೆ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವುದೊಂದೇ ಪರಿಹಾರ. ಇದಕ್ಕಾಗಿ ವನಮಹೋತ್ಸವದ ಹೆಸರಲ್ಲಿ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರ ಜೊತೆಗೆ ಅವುಗಳ ಆರೈಕೆಯೂ ನಮ್ಮ ಜವಾಬ್ದಾರಿಯಾಗಬೇಕು ಎಂದಿದ್ದರು.ಇಂದು ಎನ್. ಎ. ಗೋಪಾಲ ಶೆಟ್ಟಿ ನಮ್ಮೊಂದಿಗಿಲ್ಲ. ಆದರೆ ಅಂದಿನಿಂದ ಪ್ರತಿವರ್ಷ ವನಮಹೋತ್ಸವದ ಸಂದರ್ಭ ಕಾಡಿನಲ್ಲಿ ಒಂದಷ್ಟು ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಮಾಜಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯ್ಲ ಇಂದಿಗೂ ದಿ. ಎನ್. ಎ. ಗೋಪಾಲ ಶೆಟ್ಟರ ಚಿಂತನೆಯನ್ನು ಜೀವಂತವಿರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೊನ್ನೆ ಜೂನ್ 7ರಂದು ನಡ ಗ್ರಾಮದ ಕನ್ಯಾಡಿಯ ಪಡ್ಪು ಅರಣ್ಯ ಪರಿಸರಕ್ಕೆ ಭೇಟಿ ನೀಡಿದ ವಸಂತ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಲಾಯ್ಲ ಅಂದು ಎನ್. ಎ. ಗೋಪಾಲ ಶೆಟ್ಟರ ನೇತೃತ್ವದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ನೆಟ್ಟ ಹಣ್ಣಿನ ಗಿಡಗಳಿಗೆ ಒಂದಷ್ಟು ಗೊಬ್ಬರ ಉಣಿಸಿದ್ದಾರೆ. ಮಾತ್ರವಲ್ಲ; ಮತ್ತೆ ಹೊಸ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ.ಅಂದಿನ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದಿ. ಎನ್. ಎ. ಗೋಪಾಲ ಶೆಟ್ಟಿ ಆ ದಿನಗಳಲ್ಲಿ ಆಗಿನ ರಾಜ್ಯ ಸರಕಾರದ ಅರಣ್ಯ ಇಲಾಖೆಯ ಸಚಿವ ಬಿ. ರಮಾನಾಥ ರೈಯವರನ್ನು ಭೇಟಿಯಾಗಿ ಕಾಡಿನಲ್ಲಿ ಹಣ್ಣಿನ ಸಸಿಗಳ ನೆಡುವಿಕೆಯ ಅಗತ್ಯತೆಯನ್ನು ಮನವರಿಕೆ ಮಾಡಿದ್ದರು. ಸರಕಾರವೂ ಎನ್. ಎ. ಗೋಪಾಲ ಶೆಟ್ಟರ ಚಿಂತನೆಯನ್ನು ಒಪ್ಪಿ ವನಮಹೋತ್ಸವದ ಸಂದರ್ಭ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಕಾರ್ಯಕ್ರಮ ರೂಪಿಸಿತು. 2015ರಿಂದ ರಾಜ್ಯ ಸರಕಾರ ಆರಂಭಿಸಿದ ಕಾಡಿನಲ್ಲಿ ಹಣ್ಣಿನ ಗಿಡ ಬೆಳೆಸುವ ಕಾರ್ಯಕ್ರಮ ಇಂದಿಗೂ ಮುಂದುವರಿದಿದೆ. ಆದರೆ ನೆಟ್ಟ ಗಿಡಗಳ ಪೋಷಣೆ ಮತ್ತು ಆರೈಕೆ ಯಾರು ಮಾಡಬೇಕು ಎಂಬ ಪ್ರಶ್ನೆಗೆ ಸರಕಾರದಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ. ಪರಿಣಾಮ ಕಳೆದ ವರ್ಷ ಗಿಡ ನೆಟ್ಟ ಗುಂಡಿಯಲ್ಲೇ ಈ ವರ್ಷವೂ ಗಿಡ ನೆಡುವ ಪರಿಪಾಠ ಮುಂದುವರಿಯುತ್ತಲೇ ಇದೆ. ಆದರೆ ಕಾಡು ಮಾತ್ರ ಬೆಳೆಯುತ್ತಿಲ್ಲ.






