ಬೆಳ್ತಂಗಡಿ: ದೇಶದ ಜನತೆಗೆ ‘ಅಚ್ಛೇದಿನ್’ನ ಭ್ರಮೆ ಹುಟ್ಟಿಸಿ, ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದಲ್ಲಿ ಪೆಟ್ರೋಲ್-ಡೀಸಿಲ್-ಅಡುಗೆ ಅನಿಲ ಸಹಿತ ಎಲ್ಲ ತೈಲೋತ್ಪನ್ನಗಳ ಬೆಲೆ ಏರಿಸಿ, ಜನಜೀವನ ದುಸ್ಥರವಾಗುವಂತೆ ಮಾಡಿದೆ. ಪೆಟ್ರೋಲ್-ಡೀಸಿಲ್ ದರ ಹೆಚ್ಚಳದಿಂದ ವಸ್ತುಗಳ ಸಾಗಾಟ ದರ ಏರಿಕೆಯಾದುದರ ಪರಿಣಾಮ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಚ್ಛೇದಿನ್‌ನ ನಿರೀಕ್ಷೆಯಲ್ಲಿದ್ದ ದೇಶದ ಜನಸಾಮಾನ್ಯ ದಿನಕಳೆಯುವುದೇ ತ್ರಾಸದಾಯಕವಾಗಿದೆ. ಪೆಟ್ರೋಲ್ ದರ ಶತಕ ದಾಟಿ ಮುನ್ನುಗ್ಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ದರದಲ್ಲಿ ಅಜೇಯ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ ಎಂದು ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿದ ಕಾಂಗ್ರೇಸಿಗರು ಬೆಳ್ತಂಗಡಿಯ ಬಸ್‌ನಿಲ್ದಾಣದ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಜೂನ್ 12ರಂದು ಪ್ರತಿಭಟನೆ ನಡೆಸಿದರು.ಕೇಂದ್ರದ ಬಿಜೆಪಿ ಸರಕಾರದ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಪೆಟ್ರೋಲ್ ಬೆಲೆಯನ್ನು 100/-ರೂಪಾಯಿಗೆ ಏರಿಸಿ, ಶತಕ ದಾಖಲಿಸಿರುವುದನ್ನು ಕೇಕ್ ಕತ್ತರಿಸಿ ವ್ಯಂಗವಾಗಿ ಸಂಭ್ರಮಿಸಿದ ಕಾಂಗ್ರೇಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಪ್ರಮುಖರಾದ ಜಗದೀಶ್ ಡಿ., ಜನಾರ್ದನ, ಅನಿಲ್ ಪೈ, ಅಭಿನಂದನ್ ಹರೀಶ್ ಕುಮಾರ್, ವಸಂತ್ ಬಿ. ಕೆ., ಅಬ್ದುಲ್ ರೆಹಮಾನ್ ಪಡ್ಪು, ಭರತ್ ಕುಮಾರ್, ಮೆಹಬೂಬ್ ಮತ್ತಿತರರು ಭಾಗವಹಿಸಿದ್ದರು.






