ಪಶ್ಚಿಮಘಟ್ಟದಲ್ಲಿ ಹಸಿರು ಹೊದಿಕೆ ಅಭಿಯಾನ

ಪಶ್ಚಿಮಘಟ್ಟದಲ್ಲಿ ಹಸಿರು ಹೊದಿಕೆ ಅಭಿಯಾನ
Facebook
Twitter
LinkedIn
WhatsApp

ಬೆಳ್ತಂಗಡಿ: ಗ್ರಾಮ ಪಂಚಾಯತ್ ಅರಸಿನಮಕ್ಕಿ, ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 13 ರಂದು ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಮತ್ತು ಹತ್ಯಡ್ಕ ಗ್ರಾಮದ ಉಪ್ಪರಡ್ಕ ಎಂಬಲ್ಲಿನ ಫೋರ್ಕಳ ರಕ್ಷಿತಾರಣ್ಯದಲ್ಲಿ ಪಶ್ಚಿಮ ಘಟ್ಟಗಳಿಗೆ ಹಸಿರು ಹೊದಿಕೆ ಅಭಿಯಾನವನ್ನು ನಡೆಸಲಾಯಿತು.ಈ ಅಭಿಯಾನದಲ್ಲಿ ಸುಮಾರು 600 ಕ್ಕೂ ಹೆಚ್ಚು ಕಾಡು ಹಣ್ಣಿನ ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ರೆಖ್ಯಾ ಸಹಿತ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ವತಃ ಗಿಡಗಳನ್ನು ನೆಟ್ಟು ಅವುಗಳಿಗೆ ಪಾತಿ ಮಾಡಿದ್ದು ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗನ್ನು ನೀಡಿತ್ತು.   ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಶಶಿಧರ ಶೆಟ್ಟಿ ಮತ್ತು ಸದಸ್ಯ ದಿನೇಶ್ ಹೊಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶೀನ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರಲ್ಲದೇ; ಅರಸಿನಮಕ್ಕಿ ಗ್ರಾಮ ಪಂಚಾಯತಿನ ಪರಿಸರ ಪರವಾದ ಕಾರ್ಯಗಳು ಉಳಿದೆಲ್ಲ ಗ್ರಾಮ ಪಂಚಾಯತ್‌ಗಳಿಗೆ ಮಾದರಿಯಾಗಲಿ ಎಂದರು. ಈ ಸಂದರ್ಭದಲ್ಲಿ ವೃಕ್ಷ ಸೇವಕ ಜೀತ್ ಮಿಲನ್ ರೋಚ್ ಇವರನ್ನು ಮಂಗಳೂರು ಅರಣ್ಯ ಇಲಾಖೆ ಮತ್ತು ಎನ್‌ಇಸಿಎಫ್  ವತಿಯಿಂದ ಸನ್ಮಾನಿಸಲಾಯಿತು. ಉಪವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ರಕ್ಷಕರಾದ ಅಶೋಕ್, ಪ್ರಶಾಂತ್, ಸಂತೋಷ್, ಜಗದೀಶ್ ಮತ್ತು ತಂಡದವರು ವಿಶೇಷ ಚೇತನ ಯುವಕ ಸುದರ್ಶನ್‌ರವರ ಸೇವೆಯನ್ನು ಗುರುತಿಸಿ ಗೌರವಿಸಿದರು. ಅಭಿಯಾನಕ್ಕೆ ಸಾಥ್ ನೀಡಿದ ಅಶ್ವಮೇಧ ಗೆಳೆಯರ ಬಳಗಕ್ಕೆ ಧನ್ಯವಾದಗಳನ್ನು ಸಲ್ಲಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಕೃಷ್ಣಪ್ಪ ಗೌಡ ವಂದಿಸಿದರು.

Latest News

Related Posts