ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಧರ್ಮಸ್ಥಳ ಅಶೋಕನಗರ ದಲಿತ ಕಾಲನಿಯ ನಿವಾಸಿಗರಿಗಾಗಿ ಇಲ್ಲಿಯ ಸೂರ್ಯ ಸಭಾಭವನ ಹಾಗೂ ಆಶ್ರಮ ಶಾಲೆಯ ಸಭಾಂಗಣದಲ್ಲಿ ಜೂನ್ 16ರಂದು ಕೊವಿಡ್ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರು ಇಲ್ಲಿ ಕೋವಿಡ್ ಪರೀಕ್ಷೆಗೆ ಗಂಟಲದ್ರವವನ್ನು ಆರೋಗ್ಯ ರಕ್ಷಾ ಕವಚಗಳಾದ ಪಿಪಿಇ ಕಿಟ್ ಹಾಗೂ ಗ್ಲೌಸ್ ಧರಿಸದೇ ಸಂಗ್ರಹಿಸುವ ಮೂಲಕ ತಾವೂ ಅಪಾಯವನ್ನು ಆಹ್ವಾನಿಸಿಕೊಂಡರಲ್ಲದೇ; ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತಾ ಕ್ರಮಗಳ ಬಗ್ಗೆ ದಲಿತ ಕಾಲನಿಯ ಅಮಾಯಕರಿಗೆ ತಪ್ಪು ಸಂದೇಶ ರವಾನಿಸಿದರು. ಕೋವಿಡ್ ಪರೀಕ್ಷೆಗೆ ಗಂಟಲದ್ರವ ಸಂಗ್ರಹಿಸುವಾಗ ಪಿಪಿಇ ಕಿಟ್ ಧರಿಸಿ, ಕೈಗೆ ಗ್ಲೌಸ್ ಧರಿಸಿ, ದಾದಿಯರು ಕರ್ತವ್ಯ ನಿರ್ವಹಿಸುವುದು ಸುರಕ್ಷಿತ ಕ್ರಮ; ಒಬ್ಬ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಆದ ಮೇಲೆ ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿ, ಹೊಸ ಗ್ಲೌಸ್ ಧರಿಸಿ ಇನ್ನೊಬ್ಬ ವ್ಯಕ್ತಿಯ ಗಂಟಲುದ್ರವ ಸಂಗ್ರಹಿಸಬೇಕು. ಕೊರೋನಾ ನಿಯಂತ್ರಣ ಕಾರ್ಯಕ್ರಮಗಳಿಗಾಗಿ ಸರಕಾರಿ ಆಸ್ಪತ್ರೆಗಳಿಗೆ ಸರಕಾರ ಹಾಗೂ ವಿವಿಧ ಸೇವಾ ಸಂಸ್ಥೆಗಳು ಸಾಕಷ್ಟು ಸೌಲಭ್ಯಗಳ ಜೊತೆಗೆ ಆರೋಗ್ಯ ರಕ್ಷಾ ಸಾಮಾಗ್ರಿ ಒದಗಿಸಿದರೂ, ಸಾರ್ವಜನಿಕರ ಮಧ್ಯೆ ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯ ನಿರತವಹಿಸುತ್ತಿರುವ ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಸೌಲಭ್ಯಗಳನ್ನೂ ಒದಗಿಸದೇ ಜೀತ ಮಾಡಿಸುವ ಆರೋಗ್ಯ ಇಲಾಖೆಯ ಈ ಹುನ್ನಾರದ ಹಿಂದೆ ದೊಡ್ಡ ದಂದೆಯೇ ಇದೆ ಎಂಬ ಸಂದೇಹ ನಾಗರಿಕರನ್ನು ಕಾಡುತ್ತಿದೆ.ಧರ್ಮಸ್ಥಳದ ಆಶ್ರಮ ಶಾಲೆ ಮತ್ತು ಸೂರ್ಯ ಸಭಾಭವನದಲ್ಲಿ ನಡೆದ ಕೋವಿಡ್ ಪರೀಕ್ಷೆಯಲ್ಲಿ ಅಶೋಕನಗರದ ದಲಿತ ಕಾಲನಿಯ 305 ಮಂದಿಯ ಗಂಟಲದ್ರವವನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಯಿತು. ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಕಾರಿ ಡಾl ಆಕಾಶ್ ಹಾಗೂ ಸಿಬಂದಿ ವರ್ಗ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಉಮೇಶ್ ಕೆ. ಹಾಗೂ ಸಿಬಂದಿಗಳು ಭಾಗವಹಿಸಿ ಸಹಕಾರ ನೀಡಿದರು. ಧರ್ಮಸ್ಥಳ ದೇವಸ್ಥಾನದ ವಸತಿ ವಿಭಾಗದ ಮೆನೇಜರ್‌ಗಳಾದ ಯೋಗೀಶ್, ವಿಘ್ನೇಶ್, ರಾಮಣ್ಣ, ಸದಾನಂದ ಅವರು ಆಗಮಿಸಿ ಜನರಿಗೆ ಧೈರ್ಯ ತುಂಬಿದರು. ಆದಿ ದ್ರಾವಿಡ ಸಮಾಜ ಸೇವಾ ಸಂಘದ ಪದಾಧಕಾರಿಗಳು ಸಹಕರಿಸಿದರು. ಸಧ್ಯ ಅಶೋಕನಗರದಲ್ಲಿ 6 ಕೊರೋನಾ ಪಾಸಿಟಿವ್ ಪ್ರಕರಣಗಳಿವೆ.






