ಗ್ರಾ.ಪಂ. ಗಳಿಗೆ ವೈದ್ಯಕೀಯ ಸಲಕರಣೆ ಕಿಟ್ ಮತ್ತು ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ

ಗ್ರಾ.ಪಂ. ಗಳಿಗೆ ವೈದ್ಯಕೀಯ ಸಲಕರಣೆ ಕಿಟ್ ಮತ್ತು ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ
Facebook
Twitter
LinkedIn
WhatsApp

ಮೂಡುಬಿದಿರೆ : ಬ್ಯಾಂಕ್ ಆಫ್ ಬರೋಡ ಮೂಡುಬಿದಿರೆ ಶಾಖೆ ವತಿಯಿಂದ ಮೂಡುಬಿದಿರೆ ತಾಲೂಕಿನ ಎಲ್ಲಾ 12 ಗ್ರಾಮ ಪಂಚಾಯತ್ ಗಳಿಗೆ ಉಚಿತವಾಗಿ ನೀಡಿರುವ ವೈದ್ಯಕೀಯ ಸಲಕರಣೆ ಕಿಟ್ ಗಳನ್ನು ಮತ್ತು ಮೂಡುಬಿದಿರೆ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ನೀಡಿರುವ ದಿನಸಿ ಕಿಟ್ ಗಳನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ವಿತರಿಸಿದರು.ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ಸಭಾಂಗಣದಲ್ಲಿ ಈ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಮೂಡುಬಿದಿರೆಯ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಹುಟ್ಟಿನಿಂದ ಈವರೆಗೆ ಕಂಡು ಕೇಳರಿಯದ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಇಡಿ ಮನುಕುಲದಲ್ಲಿ ಭಯ ಹುಟ್ಟಿಸುತ್ತಾ ಕಳೆದ ಎರಡು ವರ್ಷಗಳಿಂದ ವಿಶ್ವದಾದ್ಯಂತ ಹಾವಳಿ ನಡೆಸಿದೆ. ನಮಗೆ ನಾವೇ ಧೈರ್ಯ ತುಂಬಿಕೊಂಡು ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತಾ ಭೂಮಿಯಲ್ಲಿ ಬದುಕಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದೆ. ಇಂತಹ ಭಯಾನಕ ಸನ್ನಿವೇಷದಲ್ಲಿ ರೋಗಿಯ ಬಳಿಗೆ ಕುಟುಂಬ ಸದಸ್ಯರೇ ಹೋಗಲು ಭೀತಿ ಪಡುವ ಈ ಸಂಕಷ್ಟ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ತಾಯಿಯ ಸ್ಥಾನದಲ್ಲಿ ನಿಂತು ಜನರ ಆರೋಗ್ಯ ರಕ್ಷಣೆ, ಆರೈಕೆಗೆ ಟೊಂಕ ಕಟ್ಟಿ ಕೆಲಸ ಮಾಡುತ್ತಿರುವುದು ಸರ್ವತ್ರ ಅಭಿನಂದನೀಯವಾಗಿದೆ ಎಂದರು. ಇಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬ ಆಶಾ ಕಾರ್ಯಕರ್ತೆ ಕರ್ತವ್ಯ ಲೋಪ ಎಸಗಿದರೂ ಇಡೀ ಕಾರ್ಯಕರ್ತೆಯರ ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಕಿವಿಮಾತನ್ನೂ ಹೇಳಿದರು. ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಮೂಡುಬಿದಿರೆ ತಾಲೂಕಿನ 2000 ಮಂದಿ ಅಸಂಘಟಿತ ಕಾರ್ಮಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ನಮ್ಮ ಜನರೇ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಾಗ ಶಿಫಾರಸಿಗೆ ನಮ್ಮ ಬಳಿ ಬರುತ್ತಿರುವುದು ಖೇದಕರವಾಗಿದೆ. ಇಂತಹ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ರಕ್ಷಣೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದಯಾವತಿ, ಬ್ಯಾಂಕ್ ಆಫ್ ಬರೋಡದ ಮೂಡುಬಿದಿರೆ ಶಾಖೆ ಪ್ರಬಂಧಕ ಪ್ರಭಾಕರ್ ಉಪಸ್ಥಿತರಿದ್ದರು. ಇ.ಒ. ದಯಾವತಿ ಸ್ವಾಗತಿಸಿದರು. ಪಡುಮಾರ್ನಾಡು ಗ್ರಾ.ಪಂ. ಪಿ.ಡಿ.ಒ. ಸಾಯೀಶ್ ಚೌಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Latest News

Related Posts