ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆಯ ನಿರಾಸಕ್ತಿ

ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆಯ ನಿರಾಸಕ್ತಿ
Facebook
Twitter
LinkedIn
WhatsApp

ಪಡುಮಾರ್ನಾಡು: ಕಳೆದೊಂದು ವಾರದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮೂರ್ನಾಲ್ಕು ಬಹುಮುಖ್ಯ ಕಾರ್ಯಕ್ರಮಗಳು ನಡೆದರೂ ಪಂಚಾಯತ್ ಅಧ್ಯಕ್ಷೆ ಕಲ್ಯಾಣಿಯವರು ಯಾವೊಂದು ಕಾರ್ಯಕ್ರಮದಲ್ಲೂ ಭಾಗವಹಿಸದೆ ಬೇಜವಾಬ್ದಾರಿತನ ತೋರಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ನಡೆದ ಈ ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಯಾಣಿಯವರು ಭಾಗವಹಿಸದೆ ನಿರಾಸಕ್ತಿ ವಹಿಸಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಜೂನ್ 14ರಂದು ಇಲ್ಲಿ ಎರಡು ಕಾರ್ಯಕ್ರಮಗಳು ನಡೆದಿತ್ತು.ಮಂಗಳೂರಿನ ಖ್ಯಾತ ಹೃದಯ ತಜ್ಝ ಡಾ.ಪದ್ಮನಾಭ ಕಾಮತ್ ಇವರ ನೇತೃತ್ವದಲ್ಲಿ ಕ್ಯಾಡ್(ಕಾರ್ಡಿಯಾಲಜಿ ಎಟ್ ಡೋರ್ ಸ್ಟೆಪ್ )ಫೌಂಡೇಶನ್ ಟ್ರಸ್ಟ್‌ ಇದರ ಪ್ರಾಯೋಜಕತ್ವದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯತಿ ಕಛೇರಿಯಲ್ಲಿ ಇ.ಸಿ.ಜಿ. ಟೆಲಿಕನ್ಸಲ್ಟೇಶನ್ ಸೆಂಟರ್ ಉದ್ಘಾಟನೆ ನಡೆದು ಇಸಿಜಿ ಡಿವೈಸರ್‌ನ್ನು ಅನುಷ್ಠಾನಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಗೈರುಹಾಜರು. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆ ಬಳಿಕ ಪಂಚಾಯತ್ ಕಚೇರಿಯಲ್ಲಿ ನಡೆದ ಕೋವಿಡ್ ಕಾರ್ಯಪಡೆ ಸಭೆಗೂ ಪಂಚಾಯತ್ ಅಧ್ಯಕ್ಷೆ ಗೈರು. ಇದಾದ ನಂತರ ಸರಕಾರ ಮತ್ತು ಜಿಲ್ಲಾಡಳಿತದ ಸೂಚನೆಯಂತೆ ಹಳ್ಳಿಗಳ ಕಡೆ ವೈದ್ಯರ ನಡೆ ಕಾರ್ಯಕ್ರಮವು ಪಂಚಾಯತ್ ವ್ಯಾಪ್ತಿಯ ಬೇರೆ ಬೇರೆ ವಾರ್ಡುಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ನಡೆಯಿತು. ಗ್ರಾಮ ಪಂಚಾಯತದ ಬಹುತೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರೂ ಅಧ್ಯಕ್ಷೆ ಮಾತ್ರ ಚಕ್ಕರ್ ಹೊಡೆದಿದ್ದಾರೆ. ಇಷ್ಟೇ ಏಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಯಾಣಿಯವರಿಗೆ ಗ್ರಾಮಸ್ಥರು ಮತನೀಡಿ ಆಯ್ಕೆ ಮಾಡಿರುವ ತಂಡ್ರಕೆರೆ ವಾರ್ಡಿನಲ್ಲಿ ನಡೆದಿರುವ ಈ ಕಾರ್ಯಕ್ರಮದಲ್ಲೂ ಅಧ್ಯಕ್ಷೆ ಕಲ್ಯಾಣಿಯವರ ಸುಳಿವಿಲ್ಲ. ” ಕಲ್ಯಾಣಿಯಕ್ಕ ಓಲ್ಲಾರ್ ಯೇ ?” ಎಂದು ಅವರಿಗೆ ಪ್ರೀತಿಯಿಂದ ಓಟು ಕೊಟ್ಟು ಗೆಲ್ಲಿಸಿದ ಮತದಾರರೂ ಪ್ರಶ್ನಿಸುವಂತಾಗಿದೆ. ಆ ನಂತರ ಪಡುಮಾರ್ನಾಡು ಗ್ರಾಮ ಪಂಚಾಯತವನ್ನು ಆರೋಗ್ಯ ಉಪಕೇಂದ್ರವನ್ನಾಗಿಸಿಕೊಂಡು ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದಲ್ಲಿ 45 ವರ್ಷ ಮೇಲ್ಪಟ್ಟ ನಾಗರಿಕರಿಕರಿಗೆ ಕೋವಿಡ್ ವ್ಯಾಕ್ಸೀನ್ ಚುಚ್ಚುವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತದ ಹೆಚ್ಚಿನ ಸದಸ್ಯರು ತಮ್ಮ ತಮ್ಮ ವಾರ್ಡುಗಳಲ್ಲಿ ವ್ಯಾಕ್ಸೀನ್ ಪಡೆಯದೆ ಬಾಕಿ ಉಳಿದಿದ್ದ 150ಕ್ಕೂ ಹೆಚ್ಚು ಮಂದಿಗೆ ಉಚಿತ ವ್ಯಾಕ್ಸೀನ್ ಕೊಡಿಸುವ ಮೂಲಕ ಪುಣ್ಯ ಕಟ್ಟಿಕೊಂಡಿದ್ದಾರ. ಆದರೆ ಪಂಚಾಯತ್ ಅಧ್ಯಕ್ಷೆ ಇತ್ತ ಕಣ್ಣೆತ್ತಿ ನೋಡುವ ಕೆಲಸವನ್ನೂ ಮಾಡಿಲ್ಲ. ಕೆಲವೊಂದು ಕಡಲಗಳು ಮತ್ತು ಚೆಕ್ ಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಅವರು ಅಧ್ಯಕ್ಷರ ಮನೆಗೆ ಹೋಗಿ ಸಹಿ ಹಾಕಿಸಿಕೊಂಡು ಬರುತ್ತಿದ್ದಾರೆ ಎಂಬ ಮಾಹಿತಿಯೂ ಪತ್ರಿಕೆಗೆ ಲಭ್ಯವಾಗಿದೆ. ಈ ಅಧ್ಯಕ್ಷೆ ಕಲ್ಯಾಣಿ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿರುವುದು ಇದೇ ಮೊದಲಲ್ಲ. ನಾಲ್ಕಾರು ತಿಂಗಳ ಹಿಂದೆ ಅನಾರೋಗ್ಯದ ನೆಪವೊಡ್ಡಿ ಸಾಮಾನ್ಯ ಸಭೆಗೆ ಬಾರದೆ ಮೂಡುಬಿದಿರೆ ಪೇಟೆಯಲ್ಲಿ ನಡೆದ ಭಾರತೀಯ ಜೀವ ವಿಮಾ ನಿಗಮದ ಸಭೆಯಲ್ಲಿ ಗಂಟೆಗಟ್ಟಲೆ ಕುಳಿತು ಬಂದಿರುವುದು ಅಂದೇ ಬಹಿರಂಗಗೊಂಡಿತ್ತು. “ಈ ರೀತಿ ನಿರಾಸಕ್ತಿವಹಿಸಿ ಗ್ರಾಮದ ಜನರಿಗೆ ದ್ರೋಹ ಬಗೆಯುವುದು ಯಾಕೆ ? ರಾಜೀನಾಮೆ ಕೊಟ್ಟು ತೆರಳಲಿ. ನಾವು ಬೇರೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದು ಎದುರಾಳಿ ಸದಸ್ಯರು ಆಡಿಕೊಳ್ಳುವಂತಾಗಿದೆ. ಈ ಹಿಂದೆ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಇವರು ಪಂಚಾಯತ್ ಚುನಾವಣೆಗೂ ಮೊದಲೇ ಬಿಜೆಪಿ ಸೇರಿದ್ದರು. ನಂತರ ಪಂಚಾಯತ್ ಚುನಾವಣೆಯ ಸಂದರ್ಭ ಕಾಂಗ್ರೆಸ್ ಪಕ್ಷದ ಸಹಕಾರ ಪಡೆದು ಬಿಜೆಪಿ ಬೆಂಬಲಿತ ಸದಸ್ಯರ ಎದುರೇ ಚುನಾವಣೆಗೆ ನಿಂತು ಅವರನ್ನು ಸೋಲಿಸಿ ಇವರು ಆಯ್ಕೆಯಾಗಿದ್ದರು ಕೊನೆಗೆ ಅಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭ ಮತ್ತೆ ಕುರ್ಚಿ ಏರುವ ಆಸೆಯಿಂದ ಬಿಜೆಪಿ ಬಾವುಟ ಹಿಡಿದಿದ್ದರು. ಹೀಗೆ ಪದೇ ಪದೇ ಮನಸು ಬದಲಿಸುತ್ತಾ ಚಂಚಲ ಸ್ವಭಾವ ಪ್ರದರ್ಶಿಸುವ ಇವರು ಗ್ರಾಮಸ್ಥರಿಗೆ ಮಾದರಿಯಾಗದೆ ಗ್ರಾಮಕ್ಕೇ ಒಂದು ಹೊರೆಯಾಗದಿದ್ದರೆ ಸಾಕಪ್ಪ ಎಂದು ಗ್ರಾಮಸ್ಥರು ತಾವು ನಂಬಿರುವ ದೈವ ದೇವರಲ್ಲಿ ಪ್ರಾರ್ಥಿಸುವಂತಾಗಿದೆ.

Latest News

Related Posts