ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪುತ್ತೂರು ಕಂದಾಯ ಇಲಾಖೆ ಉಪವಿಭಾಗದ ಸಹಾಯಕ ಕಮುಷನರ್ ಯತೀಶ್ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ 20ರಂದು ತುರ್ತುಸಭೆ ನಡೆಯಿತು.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಮತ್ತು ತಾಲೂಕಿನ ಪೊಲೀಸ್ ಅಧಿಕಾರಿ ವರ್ಗದವರು ನಿರಂತರವಾಗಿ ಹೊರಜಿಲ್ಲೆಗಳ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ ಯಾತ್ರಾರ್ಥಿಗಳನ್ನು ಹಿಂದಕ್ಕೆ ಕಳುಹಿಸುವ ಬಗ್ಗೆ ಕ್ರಮಕೈಗೊಳ್ಳುವುದು. ಹೊರ ಜಿಲ್ಲೆಯ ಪ್ರಮುಖ ಪ್ರವೇಶದ್ವಾರಗಳಾದ ಗುಂಡ್ಯಾ ಚೆಕ್‌ಪೋಸ್ಟ್, ಚಾರ್ಮಾಡಿ ಚೆಕ್‌ಪೋಸ್ಟ್, ನಾರಾವಿ ಚಕ್‌ಪೋಸ್ಟ್, ಉಪ್ಪಿನಂಗಡಿ ಚೆಕ್‌ಪೋಸ್ಟ್, ಸಂಪಾಜೆ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲಾಡಳಿತದಿಂದ ದೇವಸ್ಥಾನಗಳ ಪ್ರವೇಶ ನಿರ್ಬಂಧ ಕುರಿತು ಬ್ಯಾನರ್ ಗಳನ್ನು ಹಾಕಿ ಪ್ರಚಾರ ಪಡಿಸುವ ಬಗ್ಗೆ ಕ್ರಮ ಕೈಗೊಳ್ಳುವುದು, ದೇವಸ್ಥಾನದ ಪ್ರಮುಖ ಪ್ರವೇಶ ದ್ವಾರಗಳಲ್ಲಿ, ದೇವಸ್ಥಾನ, ಅನ್ನಛತ್ರ, ವಸತಿಗೃಹಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಿದೆ ಎಂಬ ಬ್ಯಾನರ್ ಗಳನ್ನು ದೇವಸ್ಥಾನದ ಆಡಳಿತದ ಮೂಲಕ ಪ್ರಚಾರ ಪಡಿಸುವುದು. ಹಾಗೂ ಶ್ರೀ ಧರ್ಮಸ್ಥಳ ದೇವಸ್ಥಾನದ ಆಡಳಿತದ ವತಿಯಿಂದ ಸರಕಾರದ ನಿರ್ಬಂಧದ ಆಜ್ಞೆ ಇರುವ ಹಿನ್ನೆಲೆಯಲ್ಲಿ ಭಕ್ತರಿಗೆ ಸೂಚನೆಗಳನ್ನು ದೃಶ್ಯ ಮತ್ತು ಪತ್ರಿಕಾ ಮಾಧ್ಯಮದಲ್ಲಿ ಪ್ರಚಾರಪಡಿಸಲು ಸಭೆಯಲ್ಲಿ ತಿಳಿಸಲಾಯಿತು.ಸಭೆಯಲ್ಲಿ ಬೆಳ್ತಂಗಡಿಯ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಮಹೇಶ್ ಜೆ., ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಓಡಿಯಪ್ಪ ಗೌಡ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲರು, ಧರ್ಮಸ್ಥಳ ರಜತಾದ್ರಿ ಕೋವಿಡ್ ಕೇರ್‌ಸೆಂಟರ್‌ನ ನೋಡೆಲ್ ಅಧಿಕಾರಿ ಡಾ. ಜಯಕೀರ್ತಿ ಜೈನ್, ಧರ್ಮಸ್ಥಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಧರ್ಮಸ್ಥಳ ಶ್ರೀ ಉಮೇಶ್ ಕೆ, ಧರ್ಮಸ್ಥಳ ಗ್ರಾಮಲೆಕ್ಕಿಗ ಪ್ರದೀಪ್, ಶ್ರೀ ಕ್ಷೇತ್ರ ಧರ್ಮಸ್ಥಳದ ಕಛೇರಿ ಮೆನೇಜರ್ ಪಾರ್ಶ್ವನಾಥ ಜೈನ್, ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರಾದ ರವಿಕುಮಾರ್, ದಿನೇಶ್ ರಾವ್, ಹರ್ಷಿತ ಜೈನ್ ಸಭೆಯಲ್ಲಿ ಉಪಸ್ಥಿತರಿದ್ದರು






