ಕಾಟಾಜೆಯಲ್ಲಿ ಅಸಮರ್ಪಕ-ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಇಲಾಖೆಯ ಅನುಮತಿ-ಆದೇಶವೇ ಇಲ್ಲ:ಅವಾಂತರವಾದರೆ ದೇವರೇ ದಿಕ್ಕು!

ಕಾಟಾಜೆಯಲ್ಲಿ ಅಸಮರ್ಪಕ-ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಇಲಾಖೆಯ ಅನುಮತಿ-ಆದೇಶವೇ ಇಲ್ಲ:ಅವಾಂತರವಾದರೆ ದೇವರೇ ದಿಕ್ಕು!
Facebook
Twitter
LinkedIn
WhatsApp
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಾಟಾಜೆ ಪರ್ಪಳ ಪರಿಶಿಷ್ಟ ಜಾತಿ ಕಾಲನಿಗೆ ಅಣಿಯೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಅಸಮರ್ಪಕವಾಗಿ ಮಾತ್ರವಲ್ಲ; ಅವೈಜ್ಞಾನಿಕವಾಗಿ ನಿರ್ವಹಿಸಿದ ಪರಿಣಾಮ ಕಳೆದ ವಾರ ಸುರಿದ ಭಾರೀ ಮಳೆಗೆ ರಸ್ತೆಯ ಇಕ್ಕೆಲಗಳಲ್ಲೂ ಮಣ್ಣು ಕೊಚ್ಚಿ ಹೋಗಿದೆ. ಮಾತ್ರವಲ್ಲ; ರಸ್ತೆ ಬದಿಯಲ್ಲಿದ್ದ ಹತ್ತಾರು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಸುದೈವವಶಾತ್ ಏನೂ ದೊಡ್ಡ ಮಟ್ಟದ ಅನಾಹುತ ಸಂಭವಿಸದ್ದರಿಂದ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಒಂದು ಹಂತದಲ್ಲಿ ಬಚಾವಾಗಿದ್ದಾರೆ. ಆದರೂ ಇವರುಗಳಿಗೆ ಆತಂಕ ಮಾತ್ರ ತಪ್ಪಿದ್ದಲ್ಲ.ನೆರಿಯ ಗ್ರಾಮದ ಕಾಟಾಜೆ ಪರ್ಪಳ ಪರಿಶಿಷ್ಟ ಜಾತಿ ಕಾಲನಿಯಿಂದ ಅಣಿಯೂರು ಪೇಟೆಗೆ ಸಂಪರ್ಕ ಕಲ್ಪಿಸುವ ಅಂದಾಜು 4ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿ ಆರಂಭಿಸುವ ಮೊದಲು ಲೋಕೋಪಯೋಗಿ ಇಲಾಖೆ ಕೈಗೊಳ್ಳಬೇಕಾದ ಯಾವೊಂದು ಪೂರ್ವ ಸಿದ್ಧತೆ ಹಾಗೂ ಕ್ರಮಗಳ ಅನುಷ್ಠಾನ ಆಗಲೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಬಿಜೆಪಿ ಶಾಸಕರ ಸಂಬಂಧಿಯಾದ ಸಿವಿಲ್ ಗುತ್ತಿಗೆದಾರ ಅದಕ್ಕೂ ಮುನ್ನವೇ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಂದ ಮೌಖಿಕ ಆದೇಶ ಹೊರಡಿಸಿಕೊಂಡು ಅನಧಿಕೃತವಾಗಿ ಇಲ್ಲಿ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ ಎನ್ನಲಾಗಿದೆ.ಲೋಕೋಪಯೋಗಿ ಇಲಾಖೆ ಇರಲಿ, ಸರಕಾರದ ಇತರ ಯಾವುದೇ ಇಲಾಖೆಯ ಕೋಟ್ಯಾಂತರ ರೂಪಾಯಿ ಅಂದಾಜು ವೆಚ್ಚದ ಇಂತಹ ಕಾಮಗಾರಿಗಳು ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾಡುವಂತೆಯೇ ಇಲ್ಲ. ಇಂತಹ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧವಾದ ಬಳಿಕ, ಕಾಮಗಾರಿಗೆ ಅನುದಾನ ಮಂಜೂರಾತಿಗೆ ಹಣಕಾಸು ಇಲಾಖೆಯ ಅನುಮೋದನೆ ಪಡೆಯಬೇಕು. ನಂತರ ಸದ್ರಿ‌ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಟೆಂಡರ್ ಅನುಮೋದನೆಯಾದ ಬಳಿಕ ಗುತ್ತಿಗೆದಾರನೊಂದಿಗೆ ಕಾಮಗಾರಿ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಇಲಾಖೆ ಸರಿಯಾದ ಎಗ್ರಿಮೆಂಟ್ ಮಾಡಿಕೊಂಡ ನಂತರ ಇಲಾಖೆ ಗುತ್ತಿಗೆದಾರನಿಗೆ ಕಾಮಗಾರಿ ನಿರ್ವಹಿಸಲು ಲಿಖಿತ ಅನುಮತಿ (ವರ್ಕ್ ಆರ್ಡರ್) ನೀಡಬೇಕು. ನಂತರ ಕಾಮಗಾರಿ ಆರಂಭಿಸುವ ಅಧಿಕೃತ ಗುತ್ತಿಗೆದಾರರ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು. ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರದ ಸಾಕಷ್ಟು ಕಾಮಗಾರಿಗಳು ಇಲಾಖೆಯ ಅಧಿಕಾರಿಗಳ ಕೃಪಾಕಟಾಕ್ಷ!ದಿಂದ ಇಲಾಖೆಯ ನಿಯಮ ಮೀರಿ ನಡೆಯುತ್ತಿದೆ. ಇದು ನೆರಿಯ ಗ್ರಾಮದ ಕಾಟಾಜೆ ಪರಿಶಿಷ್ಟ ಜಾತಿ ಕಾಲನಿಯ ರಸ್ತೆಗೆ ಮಾತ್ರ ಸೀಮಿತವಾಗಿಲ್ಲ. ಮಳೆಹಾನಿಯಂತಹ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಮಾತ್ರ ನಿಗದಿತ ಮೊತ್ತದ ಕಾಮಗಾರಿಯನ್ನು ಟೆಂಡರ್ ಕರೆಯದೇ ಅನುಷ್ಠಾನಿಸಲು ಇಲಾಖೆಗೆ ಅವಕಾಶವಿದೆ. ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಯ ಕಾಮಗಾರಿಗಳು ಟೆಂಡರ್ ಸಹಿತ ಇಲಾಖೆಯ ಯಾವುದೇ ಪ್ರಕ್ರಿಯೆ ಆಗದೇ ಅನುಷ್ಠಾನವಾಗುತ್ತಿದೆ. ಈ ಕಾಮಗಾರಿಗಳಿಗೆ ಮಾತ್ರವಲ್ಲ; ಇತರ ಕಾಮಗಾರಿಗಳಿಗೂ ತಾಲೂಕಿನ ಹೊರಗಿನ ಮೂರ್ನಾಲ್ಕು ಗುತ್ತಿಗೆದಾರರನ್ನು ಹೊರತು ಪಡಿಸಿ ಇತರರು ಯಾರೂ ಟೆಂಡರ್ ಹಾಕುವಂತಿಲ್ಲ. ಒಂದೊಮ್ಮೆ ಹಾಕಿದರೂ ಇಲಾಖಾಧಿಕಾರಿಗಳು ಕುಂಟುನೆಪ ಹೇಳಿ ಈ ಟೆಂಡರ್‌ಗಳನ್ನು ತಿರಸ್ಕರಿಸುವ ಸಂಚು ನಡಿತಿದೆ ಎನ್ನಲಾಗಿದೆ. ಯಾವುದೇ ಟೆಂಡರ್ ಸರಕಾರ ನಿಗದಿ ಪಡಿಸಿದ್ದಕ್ಕಿಂತ 5%ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಡ್ ಆದರೆ ಅಂತಹ ಕಾಮಗಾರಿಯ ಟೆಂಡರನ್ನು ರದ್ದುಪಡಿಸಿ, ಮರು ಕರೆಯಬೇಕು. ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಭಾವಿ ಗುತ್ತಿಗೆದಾರರ ಹೊಂದಾಣಿಕೆಯಿಂದ ಕಾಮಗಾರಿಗಳಿಗೆ ಸರಕಾರ ನಿಗದಿಪಡಿಸಿದ ಮೊತ್ತಕ್ಕಿಂತ 9ರಿಂದ 15% ಹೆಚ್ಚುವರಿ ಮೊಬಲಗಿಗೆ ಟೆಂಡರ್ ಆದ ಉದಾಹರಣೆಗಳೂ ಇದೆ. ಆದರೆ ಇಂತಹ ಟೆಂಡರ್ ರದ್ದು ಆಗಿ ಮರು ಟೆಂಡರ್ ಕರೆದ ಉದಾಹರಣೆಯೇ ಇಲ್ಲ. ಇದರ ಹಿಂದೆ ಲೋಕೋಪಯೋಗಿ ಇಲಾಖೆಯ ಜಿಲ್ಲೆ ಹಾಗೂ ರಾಜ್ಯಮಟ್ಟದ ಅಧಿಕಾರಿಗಳ ಕೈವಾಡ ಇದೆ ಎನ್ನಲಾಗಿದೆ. ಇದರೊಂದಿಗೆ ಕಾಮಗಾರಿಗಳನ್ನು ಅನುಷ್ಠಾನಿಸುವಾಗ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಮಗಾರಿಯ ಸಮಗ್ರ ವಿವರಗಳುಳ್ಳ ಫಲಕ ಅಳವಡಿಕೆ ಸಹಿತ ಇಲಾಖೆಯ ಎಲ್ಲ ಮಾರ್ಗಸೂಚಿಗಳನ್ನು ಮೀರಿ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರ ಬಗ್ಗೆ ಸೂಕ್ತ ತನಿಖೆ ನಡೆಸಬೇಕಾಗಿದೆ. ತಾಲೂಕಿನ ಅಭಿವೃದ್ಧಿಗೆ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನವನ್ನು ಪರಿಶ್ರಮದಿಂದ ಮಂಜೂರುಗೊಳಿಸುತ್ತಿರುವ ಶಾಸಕ ಹರೀಶ್ ಪೂಂಜ ಕಾಮಗಾರಿಯ ಸಮರ್ಪಕ ಅನುಷ್ಠಾನದತ್ತ ಗಮನಹರಿಸಿ, ಸರಕಾರದ ಅನುದಾನ ಪೋಲಾಗದಂತೆ ಸೂಕ್ತ ಎಚ್ಚರಿಕೆ ವಹಿಸಬೇಕಾಗಿದೆ. ಅಂತೆಯೇ ಟೆಂಡರ್ ಪ್ರಕ್ರಿಯೆಯೇ ನಡೆಯದೇ ತಾಲೂಕಿನಲ್ಲಿ ನೆರಿಯ ಗ್ರಾಮದ ಕಾಟಾಜೆ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಕಾಮಗಾರಿ ಸಹಿತ ನಡೆಯುತ್ತಿರುವ ಎಲ್ಲ ಅನಧಿಕೃತ ಕಾಮಗಾರಿಗಳನ್ನು ತಡೆಯುವುದರ ಜೊತೆಗೆ, ಸರಕಾರದ ಬೊಕ್ಕಸವನ್ನು ಕೊಳ್ಳೆ ಹೊಡೆಯುವ ಇಂತಹ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಶಾಸಕ ಹರೀಶ್ ಪೂಂಜ ಕ್ರಮ ಕೈಗೊಳ್ಳಲಿ ಎಂದು ತಾಲೂಕಿನ ಕಾನೂನು ಗೌರವಿಸುವ ನ್ಯಾಯಪ್ರಿಯ ನಾಗರಿಕರು ಆಗ್ರಹಿಸಿದ್ದಾರೆ.

Latest News

Related Posts