ಬೆಳ್ತಂಗಡಿ: ಇಡೀ ದೇಶದಲ್ಲಿ ಕೊರೊನಾ ಹಾವಳಿ ಸ್ವಲ್ಪ ಕಡಿಮೆಯಾಗಿದ್ದರೂ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಾ ಇದೆ. ಬೆಳ್ತಂಗಡಿ ತಾಲೂಕು ಜಿಲ್ಲೆಯಲ್ಲೇ ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿದೆ. ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಲಾಯ್ಲ ಗ್ರಾಮದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ಜಿಲ್ಲಾಡಳಿತ ಕಳೆದ ವಾರ ಇಡೀ ಗ್ರಾಮವನ್ನು ಸೀಲ್ಡೌನ್ ಮಾಡಿತ್ತು. ಇನ್ನೇನು ಲಾಯ್ಲ ಗ್ರಾಮದಲ್ಲಿ ಕೊರೋನಾ ಸೋಂಕು ಹತೋಟಿಗೆ ಬಂದು ಸೀಲ್ಡೌನ್ ತೆರವಾಯಿತು ಅನ್ನೋವಾಗಲೇ ಗ್ರಾಮದ ಕನ್ನಾಜೆ ಬಡಾವಣೆಯೊಂದರಲ್ಲಿ 28 ಪ್ರಕರಣಗಳು ಪತ್ತೆಯಾಗುವ ಮೂಲಕ ‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ’ ಎಂಬ ಮಾತಿನಂತೆ ಲಾಯ್ಲ ಗ್ರಾಮಕ್ಕೆ ಮತ್ತೆ ಕೊರೊನಾ ಸೋಂಕು ವಕ್ಕರಿಸಿದೆ. 50 ಕ್ಕಿಂತಲೂ ಅಧಿಕ ಮನೆಗಳಿರುವ ಈ ಪ್ರದೇಶಗಳಲ್ಲಿ ಇಷ್ಟೊಂದು ಪ್ರಮಾಣದ ಸೋಂಕು ಪತ್ತೆಯಾಗಿದ್ದು ಎಲ್ಲರಿಗೂ ಆತಂಕ ಪ್ರಾರಂಭವಾಗಿದೆ. ರಾಜ್ಯ ಸರಕಾರದ ಕೋವಿಡ್-19 ನಿಗ್ರಹ ನಿಯಮದ ಮಾರ್ಗಸೂಚಿಯಂತೆ ಈ ಪ್ರದೇಶ ಮತ್ತೆ ಸೀಲ್ಡೌನ್ ಆಗುವ ಎಲ್ಲ ಸಾಧ್ಯತೆ ಇದೆ.ಈ ನಡುವೆ ಇಲ್ಲಿಗೆ ಪಂಚಾಯತ್ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದ ಲಾಯ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ, ಇಲ್ಲಿನ ನಿವಾಸಿಗರೆಲ್ಲರ ಕೋವಿಡ್ ಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ.ಮಾಹಿತಿಯ ಪ್ರಕಾರ ಸೋಂಕಿತರು ಕೋವಿಡ್ ಕೇರ್ ಸೆಂಟರ್ಗೆ ಹೋಗಲು ಹಿಂದೇಟು ಹಾಕುತಿದ್ದಾರೆ. ಅಧಿಕಾರಿಗಳು ಇವರನ್ನು ಮನವೊಲಿಸುವ ಕಾರ್ಯವನ್ನೂ ಮಾಡುತಿದ್ದಾರೆ. ಈಗಾಗಲೇ ಇಲ್ಲಿ 28 ಕೊರೋನಾ ಪಾಸಿಟಿವ್ ಪ್ರಕರಣಗಳಿದ್ದು, ಇದೀಗ ಉಳಿದವರ ಕೋವಿಡ್ ಪರೀಕ್ಷೆಗೂ ಗ್ರಾಮ ಪಂಚಾಯತ್ ಕ್ರಮ ಕೈಗೊಂಡಿದ್ದು, ಇದರ ಫಲಿತಾಂಶ ಬಂದರೆ ಇನ್ನಷ್ಟು ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ. ಇಲ್ಲಿ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸುವ ಗ್ರಾಮ ಪಂಚಾಯತ್, ಪೊಲೀಸ್ ಇಲಾಖೆ ಸಹಿತ ಎಲ್ಲ ಸರಕಾರಿ ಇಲಾಖಾಧಿಕಾರಿಗಳ ಪ್ರಯತ್ನ ವಿಫಲಗೊಂಡಿದ್ದು; ಈ ಪ್ರದೇಶ ಸೀಲ್ಡೌನ್ ಆಗುವ ಸಾಧ್ಯತೆ ನಿಚ್ಚಳವಾಗಿದೆ.






