ಬೆಳ್ತಂಗಡಿ: ಸುವರ್ಣ ಮಹೋತ್ಸವ ವರ್ಷದಲ್ಲಿರುವ ಬೆಳ್ತಂಗಡಿ ರೋಟರಿ ಕ್ಲಬ್ ಕೋವಿಡ್ ಎರಡನೇ ಅಲೆಯ ಹೊಡೆತ ಸಹಿತ ಅನೇಕ ಸಮಸ್ಯೆ-ಸವಾಲುಗಳ ಮಧ್ಯೆಯೂ ಜನಪರವಾದ 1 ಸಾವಿರದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಷ್ಟ್ರಮಟ್ಟದಲ್ಲಿ ರೋಟರಿ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಅತೀ ಹೆಚ್ಚು ಕಾರ್ಯಕ್ರಮ ಸಂಘಟಿಸಿದ ಕ್ಲಬ್ ಎಂದು ಗುರುತಿಸಿಕೊಂಡಿದೆ. ಜೊತೆಗೆ ರೋಟರಿ ನ್ಯೂಸ್ ರಾಷ್ಟ್ರೀಯ ಪತ್ರಿಕೆಯಲ್ಲಿ ಬೆಳ್ತಂಗಡಿ ಕ್ಲಬ್ಬಿನ ಕಾರ್ಯಕ್ರಮಗಳ 6 ಪುಟದ ವರದಿ ಬಂದಿರುವುದು ಸಂಘಟಿತ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ ಎಂದು ರೋಟರಿ ಕ್ಲಬ್ ಬೆಳ್ತಂಗಡಿಯ ನಿರ್ಗಮಿತ ಅಧ್ಯಕ್ಷ, ನ್ಯಾಯವಾದಿ ಬಿ. ಕೆ. ಧನಂಜಯ ರಾವ್ ಅವರು ಹೇಳಿದರು.ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದ ಪಿನಾಕಿ ಸಭಾಂಗಣದಲ್ಲಿ ಜೂನ್ 29ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರಿನ ಸ್ಥಾಪಕ ಪ್ರಾಂಶುಪಾಲರು ಹಾಗೂ ಹಿರಿಯ ನ್ಯಾಯವಾದಿ ಎನ್. ಜೆ. ಕಡಂಬರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ರೋಟರಿ ಕ್ಲಬ್ ಬೆಳ್ತಂಗಡಿ ಇದೀಗ ಸುವರ್ಣ ಮಹೋತ್ಸವ ವರ್ಷದಲ್ಲಿದೆ. ರೋಟರಿ ಕ್ಲಬ್ನ ಗೌರವ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮರವರ ಸಹಕಾರದೊಂದಿಗೆ ಹಾಗೂ ಪೂರ್ವಾಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಸದಸ್ಯರ ಸಹಯೋಗದೊಂದಿಗೆ ಬೆಳ್ತಂಗಡಿ ರೋಟರಿ ಕ್ಲಬ್ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 50 ವರ್ಷಗಳಲ್ಲಿ ಹತ್ತು ಹಲವು ಸೇವಾ ಕಾಠ್ಯಕ್ರಮಗಳನ್ನು ಸಂಘಟಿಸಿರುತ್ತದೆ ಎಂದು ಅವರು ರೋಟರಿ ಕ್ಲಬ್ನ ಸಾಧನೆಯ ಸ್ಥೂಲ ವಿವರ ನೀಡಿದರು.ನಿಯೋಜಿತ ಅಧ್ಯಕ್ಷ ಶರತ್ಕೃಷ್ಣ ಪಡ್ವೆಟ್ಣಾಯ ಮಾತನಾಡಿ, ಈ ಬಾರಿ 2021-22ನೇ ಸಾಲಿನಲ್ಲಿ SERVE TO CHANGE LIVES (ಪರಿವರ್ತನೆಗಾಗಿ ಸೇವೆ) ಎಂಬ ಧ್ಯೇಯವಾಕ್ಯದಡಿಯಲ್ಲಿ ಸಮುದಾಯ ಸೇವೆ, ವೃತ್ತಿಪರ ಸೇವೆ, ಯುವಜನ ಸೇವೆ, ಅಂತರಾಷ್ಟ್ರೀಯ ಸೇವೆ, ಕ್ಲಬ್ ಸೇವೆ ಹಾಗೂ ಪರಿಸರ ಸೇವೆಯನ್ನು ನೀಡಲಿದ್ದು; ರೋಟರಿ ಕ್ಲಬ್ ಬೆಳ್ತಂಗಡಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 1ರಂದು ವರ್ಚುವಲ್ ಮೂಲಕ ನೆರವೇರಲಿದೆ ಎಂದರು.2022-23ನೇ ಸಾಲಿನ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ಆಗಿರುವ ಪ್ರಕಾಶ್ ಕಾರಂತ್ ಪದಗ್ರಹಣ ಅಧಿಕಾರಿಯಾಗಿ, ಮುಖ್ಯ ಅತಿಥಿಗಳಾಗಿ ಸಹಾಯಕ ರೋಟರಿ ಜಿಲ್ಲಾ ಗವರ್ನರ್ ಸುರೇಂದ್ರ ಕಿಣಿ ಹಾಗೂ ನಿಕಟಪೂರ್ವ ಸಹಾಯಕ ಗವರ್ನರ್ ಪ್ರತಾಪ್ಸಿಂಹ ನಾಯಕ್ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಹಾಗೂ ವಿಧಾನ ಪರಿಷತ್ ಶಾಸಕ ಪ್ರತಾಪ್ಸಿಂಹ ನಾಯಕ್, ಕಾರ್ಯದರ್ಶಿ ಶ್ರೀಧರ ಕೆ.ವಿ., ನಿಯೋಜಿತ ಕಾರ್ಯದರ್ಶಿ ಅಬೂಬಕ್ಕರ್, ಪೂರ್ವಾಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತರಿದ್ದರು.






