ಬೆಳ್ತಂಗಡಿ: ಮಡಂತ್ಯಾರು ಗ್ರಾಮ ಪಂಚಾಯಿತ್ ವತಿಯಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಡಂತ್ಯಾರು ವರ್ತಕರ ಸಂಘ ಮತ್ತು ಅಟೋ ರಿಕ್ಷಾ ಸಂಘದ ಸದಸ್ಯರಿಗೆ ಕೋವಿಡ್-19 ಲಸಿಕಾ ಅಭಿಯಾನ ಜುಲೈ 6ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ನ ಸಭಾಭವನದಲ್ಲಿ ನಡೆಯಿತು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ, ತಾಲೂಕಿನಲ್ಲಿ ಈಗಾಗಲೇ ಶೇಕಡಾ 65ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ತಾಲೂಕಿನ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಮುಂದಿನ ಆಗಸ್ಟ್ , ಸೆಪ್ಟೆಂಬರ್ ತಿಂಗಳೊಳಗೆ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ. ಕೋವಿಡ್ ನಿಯಂತ್ರಣಕ್ಕಾಗಿ ತಾಲೂಕಿನ ಜನರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡ ಕಾರಣ ಸೋಂಕು ಹರಡದಂತೆ ಕಡಿವಾಣ ಆಗಿದೆ. ಪ್ರತಿ ಗ್ರಾಮ ಪಂಚಾಯತ್ಗಳಲ್ಲಿ ಟಾಸ್ಕ್ಫೋರ್ಸ್ ಸಭೆ ನಡೆಸಿ, ಸೋಂಕಿತರ ಆರೈಕೆ ಮಾಡಲಾಗಿತ್ತು. ಅದೇ ರೀತಿ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು, ರಾಜ್ಯದಲ್ಲೇ ಮಾದರಿ ಕೋವಿಡ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.ಕೊರೋನಾ ವಾರಿಯರ್ಸ್ ಆಗಿರುವ ಆಶಾ ಕಾರ್ಯಕರ್ತೆ ಯರಿಗೆ ಸರಿಯಾದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಮುಂದಿನ ವಾರದಲ್ಲಿ 247 ಆಶಾ ಕಾರ್ಯಕರ್ತೆಯರಿಗೆ ಮಂದಿಗೆ ಮೊಬೈಲ್ ನೀಡಲಾಗುವುದು. ತಾಲೂಕಿಗೆ ಏಳು ಮಂದಿ ವೈದ್ಯರ ನೇಮಕ ಆಗಿದೆ. ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರ ಖಾಲಿ ಹುದ್ದೆ ಇದ್ದು, ಇದೀಗ ಅದೇ ಹುದ್ದೆಗೆ ಡಾl ರಶ್ಮಿ ನೇಮಕ ಆಗಿದ್ದಾರೆ. ಮೂರನೆ ಅಲೆಯ ಕುರಿತು ಜಾಗ್ರತೆ ಅಗತ್ಯ ಎಂದರು.ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಬೇಸಿಲ್ ವಾಸ್ ಮಾತನಾಡಿ, ದೇವರು ಕೊಟ್ಟ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದೇವೆ. ಅದನ್ನು ಉಳಿಸಿಕೊಳ್ಳುವಲ್ಲಿ ಎಲ್ಲರೂ ಜಾಗ್ರತೆ ವಹಿಸಬೇಕು. ಈಗಾಗಲೇ ಕೋವಿಡ್ ಎರಡು ಅಲೆಗಳನ್ನು ಜಯಿಸಿದ್ದೇವೆ. ನಮ್ಮ ನಮ್ಮ ಜಾಗ್ರತೆಯಲ್ಲಿದ್ದರೆ ಮೂರನೇ ಅಲೆಯನ್ನೂ ಕೂಡಾ ಗೆಲ್ಲಬಹುದು ಎಂದರಲ್ಲದೇ, ತಾಲೂಕಿನಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಶಾಸಕ ಹರೀಶ್ ಪೂಂಜ ಅವರು ನಿಸ್ವಾರ್ಥವಾಗಿ ಸೇವೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತೆ ಅಭಿಯಾನವನ್ನು ಕೈಕೊಂಡು, ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.ಮಡಂತ್ಯಾರು ವರ್ತಕರ ಸಂಘ, ಜೆಸೀಐ ಮಡಂತ್ಯಾರು, ರೋಟರಿ ಕ್ಲಬ್ ಮಡಂತ್ಯಾರು ಇನ್ನಿತರ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 500 ಡೋಸ್ ಲಸಿಕೆ ನೀಡಲಾಯಿತು. ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ, ಉಪಾಧ್ಯಕ್ಷೆ ಸಂಗೀತಾ ಶೆಟ್ಟಿ, ಮಾಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕರ್ಕೇರ, ಬೆಳ್ತಂಗಡಿ ತಾಲೂಕು ಪಂಚಾಯಿತ್ನ ಮಾಜಿ ಸದಸ್ಯರಾದ ಜೋಯೆಲ್ ಗೋಡ್ಫ್ರಿ ಮೆಂಡೋನ್ಸಾ ಮತ್ತು ವಸಂತಿ ಲಕ್ಷ್ಮಣ, ಬೆಳ್ತಂಗಡಿ ತಾಲೂಕು ವೈದಾಧಿಕಾರಿ ಡಾl ಕಲಾಮಧು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆಡಳಿತ ವೈದಾಧಿಕಾರಿ ಡಾl ವಿದ್ಯಾವತಿ, ಮಡಂತ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ., ಲಸಿಕಾ ಅಭಿಯಾನ ಪ್ರಮುಖ್ ಉಮೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.ಮಡಂತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು. ಮಡಂತ್ಯಾರು ಗ್ರಾಮ ಪಂಚಾಯಿತಿ ಸದಸ್ಯೆ ರೂಪಾ ಸ್ವಾಗತಿಸಿ, ಆಗ್ನೆಸ್ ಮೋನಿಸ್ ವಂದಿಸಿದರು.







