ಬೆಳ್ತಂಗಡಿ: ಬೆನ್ನು ಮೂಳೆ ಮುರಿತಕ್ಕೊಳಗಾದ ದಿವ್ಯಾಂಗರು ಇಂದು ಮಾನಸಿಕವಾಗಿ ಕುಗ್ಗಿಕೊಳ್ಳದೆ ಕಷ್ಟದೊಂದಿಗೆ ಬದುಕುವ ಅವಕಾಶವನ್ನು ಸೇವಾಧಾಮ ಒದಗಿಸಿಕೊಟ್ಟಿದೆ ಎಂದು ಸೇವಾಧಾಮದ ಸಂಚಾಲಕರಾದ ಕೆ .ಪುರಂದರ ರಾವ್ ನುಡಿದರು.ಅವರು ಡಿಯರ್ ಲೈಫ್ ಎಂಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಬೆನ್ನು ಮೂಳೆ ಮುರಿತಕ್ಕೊಳಗಾದ ದಿವ್ಯಾಂಗರಿಗೆ ಕೊಡಮಾಡಿದ ಮೆಡಿಕಲ್ ಮತ್ತು ದಿನಸಿ ಕಿಟ್ ಗಳನ್ನು ವಿತರಿಸಿ, ಈ ಸೌಲಭ್ಯವನ್ನು ಕೊಡಮಾಡಿದ ದಾನಿ ಸಂಸ್ಥೆ, ಮತ್ತು ಅದರ ಸದಸ್ಯರನ್ನು ಅಭಿನಂದಿಸಿ ಮಾತನಾಡುತ್ತಿದ್ದರು. ಡಿಯರ್ ಲೈಫ್ ಸಂಸ್ಥೆಯ ಡಿಸ್ಟ್ರಿಬ್ಯೂಟರ್, ಸ್ವತಃ ಬೆನ್ನು ಮೂಳೆ ಮುರಿತಕ್ಕೊಳಗಾದ ರಾಯನ್ ಫೆರ್ನಾಂಡಿಸ್ ರವರು ಮಾತನಾಡಿ, ಫಲಾನುಭವಿಗಳಿಗೆ ಸತತ ಪ್ರಯತ್ನದಿಂದ ಜೀವನ ಸುಧಾರಿಸಿಕೊಳ್ಳಲು ನಮ್ಮಂತಹ ಸಂಸ್ಥೆಗಳು ಸದಾ ಸಹಾಯ ನೀಡುತ್ತಿದೆ. ಈ ನಿಟ್ಟಿನಲ್ಲಿ ಫಲಾನುಭವಿಗಳು ಸಹಾಯಗಳನ್ನು ಸ್ವೀಕರಿಸಿ ಸ್ವಸಾಮರ್ಥ್ಯ ವೃದ್ಧಿಸಿ ಕೊಂಡಾಗ ನೀಡಿದ ಕೊಡುಗೆ ಫಲಪ್ರದವಾಗುತ್ತದೆ ಎಂದರು.ಸಾಂಕೇತಿಕವಾಗಿ ಕನ್ಯಾಡಿಯ ಸೇವಾನಿಕೇತನದಲ್ಲಿ ಕಿಟ್ ಹಸ್ತಾಂತರಿಸಿದ ಕಾರ್ಯಕ್ರಮದಲ್ಲಿ ಸೇವಾಭಾರತಿಯ ಅಧ್ಯಕ್ಷ ಕೆ. ವಿನಾಯಕ ರಾವ್, ಡಿಯರ್ ಲೈಫ್‌ನ ರೂಪೇಶ್ ಸುವರ್ಣ, ವಿಜಯಕುಮಾರ್, ಐವನ್ ಫೆರ್ನಾಂಡಿಸ್, ಹಾಗೂ ಸೇವಾಭಾರತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈಗಾಗಲೇ ಉಡುಪಿ ಜಿಲ್ಲೆಯ ಫಲಾನುಭವಿಗಳಿಗೆ ಸಹಾಯಹಸ್ತ ನೀಡಲಾಗಿರುವುದು ಉಲ್ಲೇಖನೀಯ. ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬೆನ್ನು ಮೂಳೆ ಮುರಿತಕ್ಕೊಳಗಾದವರಿಗಾಗಿ ಒಟ್ಟು ರೂಪಾಯಿ 1,63,000/- ಮೌಲ್ಯದ ಔಷಧಿ ಹಾಗು ದಿನಸಿ ಕಿಟ್‌ಗಳನ್ನು ಸಂಸ್ಥೆ ನೀಡಿದ್ದು ಸೇವಾಧಾಮದ ಸ್ವಯಂಸೇವಕರು ಪ್ರತಿಯೊಬ್ಬ ಫಲಾನುಭವಿಗಳ ಮನೆಗೆ ತೆರಳಿ ಕಿಟ್‌ಗಳನ್ನು ವಿತರಿಸಿದ್ದಾರೆ. ಸೇವಾಧಾಮದ ಅಧ್ಯಕ್ಷ ವಿನಾಯಕ ರಾವ್ ಕನ್ಯಾಡಿ ಕೊಡುಗೆ ನೀಡಿದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.







