ಬೆಳ್ತಂಗಡಿ: ರಾಜ್ಯದಲ್ಲಿ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇದೀಗ ರೂಪಾಯಿ 350/- ದಿನಭತ್ತೆ ನೀಡುತ್ತಿದ್ದು; ವಿವಿಧ ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳ ದಿನಭತ್ತೆಯನ್ನು ರೂಪಾಯಿ 750/-ಕ್ಕೆ ಹೆಚ್ಚಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಜುಲೈ 9ರಂದು ಭೇಟಿಯಾದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲ್ಲಿ ಒಟ್ಟು 25,000ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿಗಳಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,000ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಅಗ್ನಿಶಾಮಕದಳ, ಆರ್‌ಟಿಒ, ಕರಾವಳಿ ಪೊಲೀಸ್ ಪಡೆ, ಪ್ರವಾಹ ರಕ್ಷಣಾ ಕಾರ್ಯ ಸಹಿತ ಅಗತ್ಯವಿರುವ ಎಲ್ಲ ಕಡೆಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವೆ ಪಡೆಯಲಾಗುತ್ತಿದೆ. ಕಳೆದ ಎಪ್ರಿಲ್ 29ರಿಂದ ಜೂನ್ ತಿಂಗಳಾಂತ್ಯದ ವರೆಗೆ ಕೋವಿಡ್ ನಿಯಂತ್ರಣ ಕಾರ್ಯದಲ್ಲೂ ರಾಜ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವೆ ಪಡೆಯಲಾಗಿದೆ ಎಂಬುದನ್ನು ತಮ್ಮ ಮನವಿಯಲ್ಲಿ ನಮೂದಿಸಿರುವ ಶಾಸಕ ಹರೀಶ್ ಪೂಂಜ; ರಾಜ್ಯ ಸರಕಾರ ಈಗಾಗಲೇ ವಿವಿಧ ಶ್ರಮಿಕ ವರ್ಗಕ್ಕೆ ಕೋವಿಡ್ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ರಾಜ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳು ಈ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ. ಅಂತಹ ಗೃಹರಕ್ಷಕದಳದ ಸಿಬ್ಬಂದಿಗಳಿಗೆ ದಿನಭತ್ತೆ ಹೆಚ್ಚಿಸುವುದರ ಜೊತೆಗೆ ಸರಕಾರ ವಿಶೇಷ ಪ್ಯಾಕೇಜ್ ಕೂಡಾ ಘೋಷಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ನಿರ್ಧರಿಸುವುದಾಗಿ ಶಾಸಕ ಹರೀಶ್ ಪೂಂಜರಿಗೆ ಭರವಸೆ ನೀಡಿದ್ದಾರೆ.







