ಬೆಳ್ತಂಗಡಿ: ವೈಚಾರಿಕತನ ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಎ. ಎನ್. ಮೂರ್ತಿರಾಯರ ಕುರಿತ ಅಧ್ಯಯನ ಗ್ರಂಥ ಹೊರಬರುತ್ತಿರುವುದು ಮಹತ್ವದ ಸಂಗತಿಯಾಗಿದೆ ಎಂದು ಖ್ಯಾತ ವಿದ್ವಾಂಸ ಪ್ರೊ. ಬಿ. ಎ. ವಿವೇಕ ರೈ ಅಭಿಪ್ರಾಯಪಟ್ಟರು.
‘ಬಹುರೂಪಿ’ ಪ್ರಕಾಶನ ಜುಲೈ 11ರಂದು ಅಂತರ್ಜಾಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೇತನ ಸೋಮೇಶ್ವರ ಅವರ ಕೃತಿ ‘ಲೋಕ ರೂಢಿಯ ಮೀರಿ’ ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಎ. ಎನ್. ಮೂರ್ತಿರಾಯರ ಎಲ್ಲಾ ಕೃತಿಗಳಲ್ಲೂ ವೈಚಾರಿಕ ಚಿಂತನೆಯಿದೆ. ‘ದೇವರು’ ಕೃತಿ ಮಾತ್ರವಲ್ಲದೆ ಅವರ ಆತ್ಮ ಕಥನ, ಪ್ರವಾಸ ಕಥನ ಎಲ್ಲದರಲ್ಲಿಯೂ ಅವರು ವೈಚಾರಿಕ ನೆರಳನ್ನು ಹರಡಿದ್ದಾರೆ. ಇಂತಹ ಚಿಂತಕರ ಸಂಸ್ಕೃತಿ ಚಿಂತನೆಯ ಬಗ್ಗೆ ಚೇತನ ಸೋಮೇಶ್ವರ ಅವರು ಅಧ್ಯಯನ ಮಾಡಿರುವುದು ಮಹತ್ವದ ಸಂಗತಿ ಎಂದರು.
ಪುಸ್ತಕ ಕುರಿತು ಮಾತನಾಡಿದ ಖ್ಯಾತ ವಿಮರ್ಶಕ, ಪತ್ರಕರ್ತ ಜೋಗಿ ಅವರು ಇಡೀ ಕೃತಿ ಮೂರ್ತಿರಾಯರನ್ನು ಬಗೆ ಬಗೆಯಾಗಿ ನೋಡಲು ಹವಣಿಸುತ್ತದೆ. ಒಬ್ಬ ಲೇಖಕನನ್ನು ಇಷ್ಟು ಆಯಾಮಗಳಿಂದ ನೋಡುವುದಕ್ಕೆ ಬೇಕಾದ ಮೂಲ ಸಾಮಗ್ರಿಗಳನ್ನು ಚೇತನ್ ಅತಿ ಜತನದಿಂದ ಸಂಗ್ರಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಖ್ಯಾತ ವಿದ್ವಾಂಸರಾದ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಈ ರೀತಿಯ ಬರಹಗಳು ಒಂದು ಸಮುದಾಯವನ್ನು ವೈಚಾರಿಕವಾಗಿ ಇಡಲು ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರೊ. ಅಮೃತ ಸೋಮೇಶ್ವರರು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಎಸ್‌ಡಿಎಂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಟಿ. ಎನ್. ಕೇಶವ ಹಾಗೂ ಅಭ್ಯುದಯ ಬರಹಗಾರ-ಅಂಕಣಕಾರ ನರೇಂದ್ರ ರೈ ದೇರ್ಲ, ‘ಬಹುರೂಪಿ’ಯ ಜಿ. ಎನ್. ಮೋಹನ್, ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಶ್ಯಾಮಲಾ ಮಾಧವ, ಡಾ. ಆರ್. ನರಸಿಂಹಮೂರ್ತಿ, ಜಿ. ಎನ್. ನಾಗರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ವಾಂಸ ಎ. ಎನ್. ಮೂರ್ತಿರಾಯರ ಸಾಂಸ್ಕೃತಿಕ ಚಿಂತನೆಯ ಬಗ್ಗೆ ಡಾ. ಕೆ. ಚಿನ್ನಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಪ್ರೌಢ ಪ್ರಬಂಧ ಇದಾಗಿದ್ದು ಹಿರಿಯ ವಿದ್ವಾಂಸರಾದ ತಾಳ್ತಜೆ ವಸಂತ ಕುಮಾರ್ ಹಾಗೂ ಕೆ. ಕೇಶವ ಶರ್ಮ ಅವರು ಈ ಕೃತಿಯ ಬಗ್ಗೆ ಮಹತ್ವದ ಟಿಪ್ಪಣಿಯನ್ನು ನೀಡಿದ್ದಾರೆ.
ಈ ಬಿಡುಗಡೆ ಸಮಾರಂಭದಲ್ಲಿ ನಾಡಿನಾದ್ಯಂತ ಪುಸ್ತಕ ಪ್ರಿಯರು, ಬರಹಗಾರರು, ವಿಮರ್ಶಕರು, ಅಧ್ಯಾಪಕ ವೃಂದದವರು ಭಾಗವಹಿಸಿದ್ದರು ಎಂದು ‘ಬಹುರೂಪಿ’ಯ ಪ್ರಕಟಣೆ ತಿಳಿಸಿದೆ.






