ಹಡೀಲು ಬಿದ್ದ ಗದ್ದೆ ಹಸಿರಾಗಿಸಲು ವಿಶೇಷ ಉತ್ತೇಜನ-ಶಾಸಕ ಪೂಂಜ

ಹಡೀಲು ಬಿದ್ದ ಗದ್ದೆ ಹಸಿರಾಗಿಸಲು ವಿಶೇಷ ಉತ್ತೇಜನ-ಶಾಸಕ ಪೂಂಜ
Facebook
Twitter
LinkedIn
WhatsApp

ಬೆಳ್ತಂಗಡಿ: ರಾಜ್ಯದಾದ್ಯಂತ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬೆಳ್ತಂಗಡಿ ತಸಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯುವ ಮೂಲಕ ಹಸಿರಾಗಿಸಲು ವಿಶೇಷ ಉತ್ತೇಜನ ನೀಡಲಾಗುವುದು. ಇಲ್ಲಿನ ವೈದ್ಯನಾಥೇಶ್ವರ ದೇವರ ಸನ್ನಿಧಿಯಲ್ಲಿ ಪಾರಂಪರಿಕವಾಗಿ ನಡೆಯುವ ಕೋರಿ ಜಾತ್ರೆ ನಾಡಿನಲ್ಲೇ ಅತ್ಯಂತ ವೈಶಿಷ್ಟ್ಯಪೂರ್ಣ ಜಾತ್ರೆ. ಇಲ್ಲಿನ ದೇವರ ಗದ್ದೆಯಲ್ಲಿ ಊರವರೆಲ್ಲರೂ ಸೇರಿ ಉಳುಮೆ ಮಾಡುವ ಮೂಲಕ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಮಾದರಿ ಕಾರ್ಯ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜುಲೈ 11ರಂದು ಕೊಕ್ಕಡ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪೂಕೆರೆ ಗದ್ದೆಯಲ್ಲಿ ಕೋರಿ ಜಾತ್ರೆಯ ಅಂಗವಾಗಿ ನಡೆದ ಭತ್ತದ ನೇಜಿ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ನೇಜಿ ನಾಟಿಯ ನೇತೃತ್ವ ವಹಿಸಿದ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕಳೆಂಜ ಶ್ರೀಧರ್ ರಾವ್ ಮಾತನಾಡಿ, 5ವರ್ಷಗಳ ಮಟ್ಟಿಗೆ ಇಲ್ಲಿನ ಗದ್ದೆಯ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದೇನೆ. ಇಲ್ಲಿ‌ ಪ್ರತೀ ವರ್ಷದಂತೆ ಈ ವರ್ಷವೂ ಊರವರೇ ನೇಜಿ ನಾಟಿ ಸಹಿತ ಭತ್ತ ಕೃಷಿಯ ಎಲ್ಲ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪ್ರತೀ ವರ್ಷ 10ರಿಂದ 20ಕ್ವಿಂಟಾಲ್ ಭತ್ತ ಬೆಳೆಯಲಾಗುತ್ತಿತ್ತು. ಈ ವರ್ಷದಿಂದ 50ಕ್ವಿಂಟಾಲ್ ಭತ್ತದ ಗುರಿ ಹೊಂದಲಾಗಿದೆ ಎಂದರು.ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ, ಕೊಕ್ಕಡ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಬೆಳ್ತಂಗಡಿ ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕ ಸಂತೋಷ್ ಕುಮಾರ್ ಜೈನ್, ಕೃಷಿ ಇಲಾಖೆಯ ಅಧಿಕಾರಿ ಚಂದ್ರಕಲಾ, ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ 350ಕ್ಕೂ ಅಧಿಕ ಮಂದಿ ಗ್ರಾಮಸ್ಥರು ನೇಜಿ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Latest 5

Related Posts