ಬೆಳ್ತಂಗಡಿ: ಗ್ರಾಮೀಣ ಭಾಗದ ಜನರ ಆರ್ಥಿಕ ಅಶಕ್ತೀಕರಣಕ್ಕೆ ಸಹಕಾರಿ ಸಂಘಗಳ ಕೊಡುಗೆ ಅಪಾರ. ಇಂದು ಇಲ್ಲಿ ತನ್ನ ಮೂರನೇ ಶಾಖೆಯನ್ನು ಆರಂಭಿಸಿರುವ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಅಶಕ್ತರಾಗಿರುವವರನ್ನು ಸಶಕ್ತರನ್ನಾಗಿಸಲು ಅನೇಕ ಯೋಜನೆಗಳನ್ನು ಅನುಷ್ಠಾನಿಸುತ್ತಿದೆ. ಈ ಸೊಸೈಟಿಯ ಅಧ್ಯಕ್ಷರಾದ ಎಲೋಶಿಯಸ್ ಲೋಬೋ ಹಾಗೂ ಆಡಳಿತ ಮಂಡಳಿಯವರು ನಾಡಿನ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಆದರ್ಶಗಳನ್ನು ತಮ್ಮ ಸಂಘದ ಬೆಳವಣಿಗೆಗೆ ಅಳವಡಿಸಿಕೊಳ್ಳುವ ಮೂಲಕ ಮಾದರಿ ಸಹಕಾರಿ ಸಂಘವನ್ನು ಬೆಳೆಸುತ್ತಿದ್ದಾರೆ. ಈ ಸೊಸೈಟಿಯು ಜಿಲ್ಲೆ ಹಾಗೂ ರಾಜ್ಯದಾದ್ಯಂತ ವಿಸ್ತರಣೆಯಾಗಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹಾರೈಸಿದರು.ಅವರು ಜುಲೈ 14ರಂದು ವೇಣೂರಿನ ಜಿನಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡ ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 3ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರುಗಳಾದ ವಂದನೀಯ ಪೀಟರ್ ಅರನ್ಹಾ ಆಶೀರ್ವಚನಗೈದು ಸಂಸ್ಥೆಗೆ ಶುಭ ಹಾರೈಸಿದರು. ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂದನೀಯ ಜೋಸೆಫ್ ವಲಿಯಪರಂಬಿಲ್ ಭದ್ರತಾ ಕೊಠಡಿ ಉದ್ಘಾಟಿಸಿ, ಸಂಸ್ಥೆಯನ್ನು ಆಶೀರ್ವದಿಸಿ ಶುಭ ಹಾರೈಸಿದರು. ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಜಯರಾಮ್ ಶೆಟ್ಟಿ ಖಂಡಿಗ, ನಿವೃತ್ತ ಶಿಕ್ಷಕ ಎಲ್. ಜೆ. ಫೆರ್ನಾಂಡಿಸ್, ವೇಣೂರು ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ವಿಜಯರಾಜ ಅತಿಕಾರಿ, ವೇಣೂರಿನ ಪ್ರಗತಿಪರ ಕೃಷಿಕ ಥೋಮಸ್ ಆರ್. ನೊರೋನ್ಹಾ, ವೇಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಕ್ರಾಸ್ತಾ ಹಾಗೂ ಅನೂಪ್ ಜೆ. ಪಾಯ್ಸ್, ಸ್ಥಳೀಯ ಪ್ರಮುಖ ಸ್ಟೀವನ್ ಡಿ’ಕುನ್ಹ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ, ವೇಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಕ್ರಾಸ್ತಾ ಹಾಗೂ ಅನೂಪ್ ಜೆ. ಪಾಯ್ಸ್, ಸೊಸೈಟಿಯ ಅಧ್ಯಕ್ಷ ಎಲೋಶಿಯಸ್ ಲೋಬೋರವರನ್ನು ಸಮ್ಮಾನಿಸಿ ಗೌರವ ಸಲ್ಲಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಲೋಶಿಯಸ್ ಲೋಬೊ ಮಾತನಾಡಿ, ಸಂಘದ ಬೆಳವಣಿಗೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರಲ್ಲದೇ ಮುಂದಿನ ದಿನಗಳಲ್ಲಿ ಉಜಿರೆ, ಕಡಬ, ಉಪ್ಪಿನಂಗಡಿ ಹಾಗೂ ಮೂಡುಬಿದಿರೆಯಲ್ಲಿ ಸಂಘದ ಶಾಖೆಗಳನ್ನು ಆರಂಭಿಸುವುದಾಗಿ ಘೋಷಿಸಿದರು.ಸಂಘದ ನಿರ್ದೇಶಕ ವಿನ್ಸೆಂಟ್ ರೋಡ್ರಿಗಸ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಲೋಶಿಯಸ್ ಲೋಬೊ ಆರಂಭದಲ್ಲಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್, ನಿರ್ದೇಶಕ ಅಲ್ಫೋನ್ಸ್ ಪ್ರಾಂಕೊ ಮತ್ತಿತರರು ಸಹಕರಿಸಿದರು. ಉಪಾಧ್ಯಕ್ಷ ಜ್ಹೋನ್ ಅರ್ವಿನ್ ಡಿ’ಸೋಜಾ ವಂದಿಸಿದರು.






