ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದ್ದು, ತೀರ್ಥ ಮಂಟಪ ಹಾಗೂ ಸುತ್ತು ಪೌಳಿಯ ಶಿಲಾಪೂಜೆ ಕಾರ್ಯಕ್ರಮ ಜುಲೈ 17ರಂದು ಜರಗಿತು.ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಊರಿನ ದೇವಸ್ಥಾನದ ಅಭಿವೃದ್ಧಿ ಪ್ರತಿಯೊಬ್ಬನ ಜವಾಬ್ದಾರಿಯಾಗಿದ್ದು, ಪರಸ್ಪರ ಸಹಕಾರದ ಜೊತೆ ಮುಂದುವರಿದರೆ ಕೆಲಸಗಳು ನಿರ್ವಿಘ್ನವಾಗಿ ಸಾಗಿ ನಿಯೋಜಿತ ಅವಧಿಯೊಳಗೆ ಪೂರ್ಣಗೊಳ್ಳುತ್ತವೆ ಎಂದು ಹೇಳಿದರು.ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ದಿ ಬಿ. ಭುಜಬಲಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕೇಶ್ ರಾವ್, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ, ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್, ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಗೌಡ, ಬಂಗಾಡಿ ಸಿ.ಎ. ಬ್ಯಾಂಕಿನ ಅಧ್ಯಕ್ಷ ಹರೀಶ್ ಸಾಲಿಯಾನ್, ಉದ್ಯಮಿಗಳಾದ ಅರುಣ್ ಕುಮಾರ್, ದಿನೇಶ್ ಕುಮಾರ್, ಮುಖಂಡರಾದ ದಿನೇಶ್ ಗೌಡ, ಮೋಹನಗೌಡ, ಕೇಶವ ಫಡ್ಕೆ, ರಾಜಶೇಖರ್ ರಾವ್, ಮೃತ್ಯುಂಜಯ ರಾವ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬಿ. ಕೆ. ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು.ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ನವೀಕರಣ ಕಾಮಗಾರಿಗಳನ್ನು ನಡೆಸುವ ಯೋಜನೆ ರೂಪಿಸಿದ್ದು, ಗರ್ಭಗುಡಿಯ ಕಾಮಗಾರಿ ಪೂರ್ಣಗೊಂಡಿದೆ. ಡಿಸೆಂಬರ್ ತಿಂಗಳಿನಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ಉದ್ದೇಶಿಸಿದ್ದು ತೀರ್ಥ ಮಂಟಪ, ಗಣಪತಿ ಹಾಗೂ ದುರ್ಗಾಪರಮೇಶ್ವರಿ ಗುಡಿಗಳು ಹಾಗೂ ಇತರ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಭಜಕರ ಸಭೆ ನಡೆದಿದ್ದು, ದೇವಸ್ಥಾನದ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಇತರರು ಸೇರಿ ಶ್ರಮದಾನದ ಮೂಲಕ ಇತರ ಕಾಮಗಾರಿಗಳನ್ನು ಭರದಿಂದ ನಿರ್ವಹಿಸುತ್ತಿದ್ದಾರೆ.






