ಬೆಳ್ತಂಗಡಿ : ಇನ್ನೊಬ್ಬರ ಮನಸ್ಸಿನ ನೋವನ್ನು ಅರಿಯುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು. ಇದಕ್ಕಾಗಿ ಸಂಸ್ಕಾರಯುತ ಶಿಕ್ಷಣ ಅಗತ್ಯವಿದೆ. ಬದುಕು ಮತ್ತು ಭೋದನೆ ಒಂದೇ ಇರಬೇಕು. ನಾವು ಯಾರನ್ನೂ ದ್ವೇಷಿಸಬಾರದು. ನಮ್ಮಲ್ಲಿರುವ ಕಾಮ, ಕ್ರೋದ, ಮದ, ಮತ್ಸರಗಳನ್ನು ದ್ವೇಷಿಸಬೇಕು. ಇದಕ್ಕಾಗಿ ಮನಸ್ಸಿನ ನಿಯಂತ್ರಣ ಅಗತ್ಯವಾಗಿದ್ದು, ಅದಕ್ಕಾಗಿ ನಿತ್ಯ ಭಗವಂತನ ಸೇವೆ ಮಾಡಬೇಕು ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.ಅವರು ಜುಲೈ 24ರಂದು ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು. ಸ್ವಚ್ಚ ಚಿಂತನೆಯೊಂದಿಗೆ ಬದುಕನ್ನು ರೂಪಿಸಿದಾಗ ನಿರ್ಭಯ ಬದುಕು ನಮ್ಮದಾಗುತ್ತದೆ. ಜಾತಿ, ಧರ್ಮ, ಬೇದವನ್ನು ಮರೆತು ಪ್ರೀತಿಯಿಂದ ಬದುಕು ಕಟ್ಟಿಕೊಂಡಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ. ಕೆಲವೊಮ್ಮೆ ಸ್ವಯಂ ಅಪರಾಧಗಳಿಂದ ನೆಮ್ಮದಿ ಇಲ್ಲದಂತಾಗುತ್ತದೆ. ಸಮಾಜದ ಅಭಿವೃದ್ಧಿಗೆ ಜಾತಿ ಸಂಘಟನೆಗಳು ಅಗತ್ಯ. ಜಾತಿ ಸಂಘಟನೆಗಳು ಇನ್ನೊಂದು ಜಾತಿಯನ್ನು ತಿರಸ್ಕರಿಸುವಂತಾಗಬಾರದು. ಸಮುದಾಯದ ನೋವುಂಡವರ ಕಣ್ಣೀರನ್ನು ಒರೆಸುವ ಕಾರ್ಯ ಜಾತಿ ಸಂಘಟನೆಗಳು ಮಾಡಬೇಕು ಎಂದರು.ಶಾಸಕ ಹರೀಶ್ ಪೂಂಜಾ ಮಾತನಾಡಿ, ನಮ್ಮ ತಾಲೂಕಿಗೆ ಸದ್ಗುರುಶ್ರೀಗಳಂತಹ ಶ್ರೇಷ್ಠ ಯತಿವರ್ಯರು ಸಿಕ್ಕಿರುವುದು ನಮ್ಮ ಭಾಗ್ಯ. ಅದರಲ್ಲೂ ಚಾತುರ್ಮಾಸ್ಯ ವ್ರತಾಚರಣೆಯನ್ನು ಮಾಡುವ ಮೂಲಕ ಇದನ್ನು ನೋಡುವ ಭಾಗ್ಯ ಸಿಕ್ಕಿರುವುದು ಹೆಮ್ಮೆ ಎನಿಸುತ್ತದೆ. ಶ್ರೀಗಳು ಸಮಾಜದಲ್ಲಿ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದ್ದು ಈ ಮೂಲಕ ಸಮಾಜವನ್ನು ಕಟ್ಟುವ ಸಂಕಲ್ಪ ಮಾಡಿದ್ದಾರೆ ಎಂದರು.ವಿಧಾನಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್ ಮಾತನಾಡಿ, ಪ್ರತಿಯೊಬ್ಬರೂ ಕನಸನ್ನು ಕಾಣುವಾಗ ದೊಡ್ಡದೇ ಕನಸನ್ನು ಕಾಣಬೇಕು. ಇದೇ ರೀತಿಯಾಗಿ ಈ ಕ್ಷೇತ್ರದ ಹಿಂದಿನ ಗುರುಗಳಾದ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ದೊಡ್ಡ ಕನಸನ್ನು ಕಂಡು ಭವ್ಯವಾದ ಶ್ರೀರಾಮ ಮಂದಿರವನ್ನು ನಿರ್ಮಿಸಿದ್ದಾರೆ. ಈ ಮೂಲಕ ರಾಮನನ್ನು ಹತ್ತಿರದಿಂದ ಕಾಣಲು ನಮಗೆ ಭಾಗ್ಯ ಸಿಕ್ಕಿದೆ. ಇಲ್ಲಿ ಅನೇಕ ಧರ್ಮ ಕಾರ್ಯಗಳು ನಡೆಯುತ್ತಿದ್ದು, ಇದಕ್ಕಾಗಿ ಈಗಿನ ಬ್ರಹ್ಮಾನಂದಶ್ರೀಗಳು ಸಮಾಜದಲ್ಲಿ ಧರ್ಮ ಜಾಗೃತಿಯನ್ನು ಬೆಳೆಸಲು ಮುಂದಾಗಿದ್ದಾರೆ ಎಂದರು.ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಭಟ್ಕಳದ ಮಾಜಿ ಶಾಸಕ ಮಾಂಕಾಳ್ ವೈದ್ಯ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಶುಭ ಹಾರೈಸಿದರು.ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪಿತಾಂಬರ ಹೆರಾಜೆ, ರವಿಶಂಕರ್ ಮಿಜಾರು, ಚಾತುರ್ಮಾಸ್ಯ ಉತ್ಸವದ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು. ಶ್ರೀಗೋಕರ್ನಾಥೇಶ್ವರ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಶ್ರೀಲಕ್ಷ್ಮೀಪತಿ ಗೋಪಾಲಾಚಾರ್ಯ ಆಗಮಪ್ರವೀಣ ಬೆಂಗಳೂರು ಇವರು ಪೌರೋಹಿತ್ಯ ನಡೆಸಿದರು.






