ಬೆಳ್ತಂಗಡಿ: ಸಂಘದ ಸದಸ್ಯರ ಅನುಕೂಲತೆಯ ದೃಷ್ಠಿಯಿಂದ ಶಾಸಕರ ನಿರ್ದೇಶನದಂತೆ ಗೃಹನಿರ್ಮಾಣ ಸಾಲವನ್ನು 11% ಬಡ್ಡಿದರದಲ್ಲಿ ಸಂಘದ ವತಿಯಿಂದ ನೀಡುವ ಮಹತ್ವದ ಚಿಂತನೆಯನ್ನು ನಡೆಸಿದ್ದೇವೆ ಎಂದು ಪಡಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್ ಕೆ. ಎಸ್. ತಿಳಿಸಿದರು.ಅವರು ಜುಲೈ 31ರಂದು ಸಂಘದ ವಠಾರದಲ್ಲಿ ಜರಗಿದ 2020-21ನೇ ಸಾಲಿನ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ವ ಸದಸ್ಯರ ಸಹಕಾರದಿಂದ ಸಂಘ ನಿರಂತರ ಅಭಿವೃದ್ಧಿ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ರೂಪಾಯಿ 2,28,26,548 ಪಾಲು ಬಂಡವಾಳ ಹೊಂದಿದ್ದು, ರೂಪಾಯಿ 15,5836,470 ಠೇವಣಿ ಹೊಂದಿದೆ. ರೂಪಾಯಿ 17,98,47,456 ಸಾಲ ನೀಡಲಾಗಿದ್ದು, 100% ಸಾಲ ವಸೂಲಾತಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಂಘವು ರೂಪಾಯಿ 83,75,434 ಲಾಭ ಹೊಂದಿದ್ದು, ಸದಸ್ಯರಿಗೆ 16% ಡಿವಿಡೆಂಡ್ ಘೋಷಿಸಲಾಗಿದೆ ಎಂದರು.ಇತ್ತೀಚೆಗೆ ನಿಧನ ಹೊಂದಿದ ಸಹಕಾರಿ ದುರೀಣ ಎನ್. ಎಸ್. ಗೋಖಲೆ ಅವರ ನಿಧನಕ್ಕೆ ಮೌನಪ್ರಾರ್ಥನೆ ಮೂಲಕ ನುಡಿನಮನ ಸಲ್ಲಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಸಂಘದ 15 ಮಂದಿ ಬಡ ಕುಟುಂಬದ ಸದಸ್ಯರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಸಂಘದ ವತಿಯಿಂದ ಸಹಾಯಧನದ ಚೆಕ್ಕನ್ನು ವಿತರಿಸಲಾಯಿತು.ಸಂಘದ ಉಪಾಧ್ಯಕ್ಷ ಶಂಕರ ಶೆಟ್ಟಿ, ನಿರ್ದೇಶಕರುಗಳಾದ ಕೃಷ್ಣಪ್ಪ, ಸುನೀತಾ, ಶ್ರೀಧರ ಪೂಜಾರಿ, ಲಿಯೋ ಸಿಕ್ವೇರಾ, ಅಂತೋನಿ ಫೆರ್ನಾಂಡಿಸ್, ಸಂತೋಷ್ ಶೆಟ್ಟಿ, ಕಿಶೋರ್, ಹಸೈನಾರ್, ಎಸ್ಸಿಡಿಸಿಸಿ ಬ್ಯಾಂಕ್ನ ವಲಯ ಮೇಲ್ವಿಚಾರಕ ಸಂದೇಶ್ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸಹಕರಿಸಿದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ ಎ. ಅವರು ವರದಿ ಮಂಡಿಸಿದರು. ನಿರ್ದೇಶಕಿ ಉಮಾವತಿ ಸ್ವಾಗತಿಸಿ, ನಿರ್ದೇಶಕ ನಾರಾಯಣ ಮೂಲ್ಯ ವಂದಿಸಿದರು. ಶಿಕ್ಷಕ ಕೆ. ಶಿವಶಂಕರ ಭಟ್ ಕಾರ್ಯಕ್ರಮ ನಿರ್ವಹಿಸಿದರು.ಸರಕಾರಕ್ಕೆ ಅಫೀಲು ಮಾಡಲಾಗಿರುವ 40 ಸೆಂಟ್ಸ್ ಜಾಗದ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಶಾಸಕ ಹರೀಶ್ ಪೂಂಜರು, ಸಂಘದ ಹಿಂಬದಿಯಲ್ಲಿ ಗೋಡೌನ್, ಸಭಾಭವನ ನಿರ್ಮಾಣಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಸುಮಾರು 40 ಸೆಂಟ್ಸ್ ಜಾಗವನ್ನೂ ಒದಗಿಸಿಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಗರ್ಡಾಡಿಯಲ್ಲಿ ಸಂಘದ ಶಾಖೆ, ಪ್ರಧಾನಮಂತ್ರಿ ಜನೌಷದ ಕೇಂದ್ರ ಹಾಗೂ ಸಭಾಭವನ ನಿರ್ಮಿಸಲು ಅನುಕೂಲವಾಗುವಂತೆ 70 ಸೆಂಟ್ಸ್ ಜಾಗವನ್ನು ಸಂಘಕ್ಕೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ಕೆ. ಎಸ್. ಯೋಗೀಶ್ ಕುಮಾರ್ ಮಹಾಸಭೆಗೆ ತಿಳಿಸಿದರು.






