ಭಜನಾ ತಂಡಗಳ ಅಧ್ಯಕ್ಷ-ಕಾರ್ಯದರ್ಶಿಗಳ ಸಭೆ

ಭಜನಾ ತಂಡಗಳ ಅಧ್ಯಕ್ಷ-ಕಾರ್ಯದರ್ಶಿಗಳ ಸಭೆ
Facebook
Twitter
LinkedIn
WhatsApp

ಬೆಳ್ತಂಗಡಿ: ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯ ಭಜನಾ ಮಂಡಳಿಗಳಿಂದಾಗಿದೆ. ಭಜನಾ ಮಂದಿರಗಳ ಅಸ್ತಿತ್ವ ಉಳಿಸುವ ನಿಟ್ಟಿನಲ್ಲಿ ಸರಕಾರಿ ದಾಖಲೆಗಳನ್ನು ಸರಿಪಡಿಸುವ ಜತೆಗೆ ಸಂಪೂರ್ಣ ಮೂಲ ಸೌಕರ್ಯ ಅಭಿವೃದ್ಧಿಗೆ ಕಂದಾಯ ಸಚಿವ ಆರ್. ಅಶೋಕ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಬೆಳ್ತಂಗಡಿ ತಾಲೂಕಿನ ಭಜನಾ ಮಂದಿರಗಳ ಮೂಲ ಸೌಕರ್ಯಗಳ ಕುರಿತು ಮಂದಿರ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಜತೆ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಸಭಾಭವನದಲ್ಲಿ ಆಗಸ್ಟ್ 1ರಂದು ನಡೆಸಲಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಮಂದಿರಗಳಿಗೆ ಹಕ್ಕುಪತ್ರ ನೀಡುವ ಸಲುವಾಗಿ ಮೂರು ವರ್ಷದ ನೋಂದಣಿ ಸೇರಿದಂತೆ ಕೆಲವು ದಾಖಲೆ ಅಗತ್ಯವಾಗಿದೆ. ಪೈಲೆಟ್ ಯೋಜನೆಯಂತೆ ಸರಕಾರದ ಮಟ್ಟದಲ್ಲಿ ಸೂಕ್ತ ದಾಖಲೆಯೊಂದಿಗೆ ಸರಕಾರಿ ಸ್ಥಳದಲ್ಲಿ ಈಗ ಕಟ್ಟಿರುವ ಭಜನಾ ಮಂಡಳಿಯನ್ನು ಸಕ್ರಮಗೊಳಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ನ್ಯಾಯವಾದಿಗಳಲ್ಲಿ ಹಾಗೂ ಕಂದಾಯ ಅಧಿಕಾರಿಗಳಲ್ಲಿ ಚರ್ಚೆ ನಡೆಸಲಾಗಿದೆ ಎಂದರು.ಕೊರೊನಾ ನಡುವೆ ಭಜನಾ ಕಾರ್ಯಗಳು ಸ್ಥಗಿತವಾಗಿದೆ. ತಾಲೂಕಿನ ಭಜನಾ ತಂಡಗಳ ಬಲವರ್ಧನೆಗೆ 15ದಿನಗಳ ಒಳಗಾಗಿ ಭಜನಾ ಸ್ಪರ್ಧೆಗೆ ನೋಂದಾವಣೆ ನಡೆಸಲು ಅವಕಾಶ ಕಲ್ಪಿಸಲಾಗುವುದು. ಭಜನಾ ಮಂಡಳಿಗಳು ಇದ್ದಲ್ಲಿಯೇ ನೇರ ಪ್ರಸಾರ ನಡೆಸಿ, ವಿಜಯಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಪ್ರಥಮ 5ಲಕ್ಷ ರೂಪಾಯಿ, ದ್ವಿತೀಯ 2.50ಲಕ್ಷ ರೂಪಾಯಿ, ಹಾಗೂ ಐದು ತಂಡಗಳಿಗೆ ತಲಾ 1ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. 15 ವರ್ಷದ ಕೆಳಗಿನ ಮಕ್ಕಳಿಗೂ ನಿಯಮ ರೂಪಿಸಿ ಸ್ಪರ್ಧೆ ನಡೆಸಲು ಚಿಂತಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಘೋಷಿಸಿದರು.ವಿಶ್ವಹಿಂದು ಪರಿಷತ್ ಬೆಳ್ತಂಗಡಿ ತಾಲೂಕು ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ರಾಜಕೀಯ ಶಕ್ತಿಯೊಂದಿಗೆ ಧರ್ಮದ ಬಲವರ್ಧನೆಯ ಕೆಲಸವಾಗಬೇಕಿದೆ. ಕಾನೂನಿನ ಚೌಕಟ್ಟಿನೊಳಗೆ ಭಜನಾ ಮಂಡಳಿಗಳ ಅಭಿವೃದ್ಧಿಯಾಗಬೇಕಿದ್ದು, ಈ ಮೂಲಕ ಭಜನಾ ಸಂಸ್ಕೃತಿ ಉಳಿಸುವ ಕೆಲಸವಾಗಬೇಕಿದೆ. ಸ್ವಚ್ಛ ಭಾರತ್ ಅಡಿಯಲ್ಲಿ ಪಂಚಾಯಿತಿ ಮೂಲಕ ಮೂಲಭೂತ ಸೌಕರ್ಯ ಪಡೆಯಲು ಅವಕಾಶ ಸಿಗಲಿ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಶೆಟ್ಟಿ, ಭಜನಾ ಪರಿಷತ್ ತಾಲೂಕು ಕಾರ್ಯದರ್ಶಿ ಜನಾರ್ದನ ಉಪಸ್ಥಿತರಿದ್ದರು. ಬಿಜೆಪಿಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.ಸಭೆಯಲ್ಲಿ ತಾಲೂಕಿನ 100ಕ್ಕೂ ಅಧಿಕ ಭಜನಾ ಮಂಡಳಿಗಳ ಪ್ರಮುಖರು ಭಾಗವಹಿಸಿದ್ದರು.ಸರಕಾರಿ ಜಾಗದಲ್ಲಿರುವ ಭಜನಾ ಮಂಡಳಿಗೆ ದಾಖಲೆ, ಶೌಚಾಲಯ ವ್ಯವಸ್ಥೆ, ನವೀಕರಣ ಹಾಗೂ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರಕಾರಿ ಸ್ಥಳದಲ್ಲಿ ಕಟ್ಟಿದ ಭಜನಾ ಮಂಡಳಿಗಳ ದಾಖಲೆ ಸರಿಪಡಿಸಿ ಹಕ್ಕುಪತ್ರ ನೀಡುವ ಕುರಿತು, ನೀರಿನ ಸೌಕರ್ಯ, ವಿದ್ಯುತ್ ಸಂಪರ್ಕ, ಮಂದಿರಗಳ ಕಟ್ಟಡ ನವೀಕರಣ ಮೊದಲಾದ ವಿಷಯದಲ್ಲಿ ಶಾಸಕರು ಚರ್ಚೆ ನಡೆಸಿದರು.

Latest 5

Related Posts